ಚೀನಾದಲ್ಲಿ ನಡೆಯುತ್ತಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಅಮೋಘ ಪ್ರದರ್ಶನ ನೀಡಿ ಟೂರ್ನಿಯ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಆದರೆ ಭಾರತದ ಭರವಸೆಯ ಮಹಿಳಾ ಸಿಂಗಲ್ಸ್ ಆಟಗಾರ್ತಿ ಉನ್ನತಿ ಹೂಡಾ ನಿರಾಸೆಯನ್ನು ಅನುಭವಿಸಿದ್ದಾರೆ.
ಒಲಿಂಪಿಕ್ ಕ್ರೀಡಾ ಕೇಂದ್ರ ಜಿಮ್ನಾಷಿಯಂ ನಲ್ಲಿ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಸೆಟ್ಟಿ ಜೋಡಿ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಏಕಪಕ್ಷೀಯ ಗೆಲುವು ದಾಖಲಿಸಿತು. ಈ ಮೂಲಕ ಈ ಟೂರ್ನಿಯ ಸೆಮಿಫೈನಲ್ ಹಂತವನ್ನು ತಲುಪಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಸೆಟ್ಟಿ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ 21-18, 21-14 ರಿಂದ ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೋ ಈ ಯಿ ಇನ್ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಭಾರತದ ಜೋಡಿ ಕೇವಲ 40 ನಿಮಿಷಗಳಲ್ಲಿ ಪಂದ್ಯ ಗೆದ್ದು ಮುನ್ನಡೆ ಸಾಧಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಸಾತ್ವಿಕ್, ಚಿರಾಗ್ ಜೋಡಿ ಮಲೇಷ್ಯಾದ ಆರನ್ ಚಿಯಾ, ವೂಯಿ ಯಿಕ್ ವಿರುದ್ಧ ಹೋರಾಟ ನಡೆಸಲಿದೆ.
ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಉನ್ನತಿ ಹೂಡಾ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಇವರು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕದ ಸಾಧನೆ ಮಾಡಿರುವ ಪಿವಿ ಸಿಂಧು ಅವರನ್ನು ಮಣಿಸಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉನ್ನತಿ 16-21, 12-21 ರಿಂದ ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಜಪಾನ್‌ನ ಅಕಾನೆ ಯಮಗಾಚಿ ವಿರುದ್ಧ 33 ನಿಮಿಷಗಳ ಹೋರಾಟದಲ್ಲಿ ಸೋಲು ಕಂಡರು. 17 ವರ್ಷದ ಉನ್ನತಿ ಶುಕ್ರವಾರ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ತಮಗಿಂತ ಹೆಚ್ಚಿನ ಶ್ರೇಯಾಂಕದ ಆಟಗಾರ್ತಿಯ ವಿರುದ್ಧ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದ ಉನ್ನತಿ ತಮ್ಮ ಅಭಿಯಾನ ಪೂರ್ಣಗೊಳಿಸಿದರು.