September 27: ಕ್ರಿಕೆಟ್ ಅಭಿಮಾನಿಗಳಿಗೆ ಫುಲ್ ಧಮಾಕ; ಒಂದೇ ದಿನ 4 ಪಂದ್ಯಗಳು
ಸೆಪ್ಟೆಂಬರ್ 27 ಕ್ರಿಕೆಟ್ ಅಭಿಮಾನಿಗಳಿಗೆ ಬಹಳ ರೋಮಾಂಚಕಾರಿ ದಿನವಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಒಟ್ಟು 4 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಪಂದ್ಯಗಳನ್ನು ಕ್ರಿಕೆಟ್ ಅಭಿಮಾನಿಗಳು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
ಅಚ್ಚರಿಯೆಂದರೆ ಇಂದು (ಶುಕ್ರವಾರ) ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿವೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನುಡುವಿನ ಎರಡನೇ ಟೆಸ್ಟ್ ಪಂದ್ಯದೊಂದಿಗೆ ದಿನದಾಟ ಆರಂಭವಾಗಲಿದೆ. ಇದಲ್ಲದೇ ಇನ್ನೂ ಮೂರು ಅಂತಾರಾಷ್ಟ್ರೀಯ ಪಂದ್ಯಗಳು ದಿನವಿಡೀ ನಡೆಯಲಿವೆ. ಈ ಎಲ್ಲಾ ಪಂದ್ಯಗಳ ವೇಳಾಪಟ್ಟಿ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ-ಬಾಂಗ್ಲಾದೇಶ ಟೆಸ್ಟ್
ಭಾರೀ ಕುತೂಹಲ ಮೂಡಿಸಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದೊಂದಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಸೆಪ್ಟೆಂಬರ್ 27 ರ ದಿನ ಪ್ರಾರಂಭವಾಗಲಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 280 ರನ್‌ಗಳ ದೊಡ್ಡ ಅಂತರದಿಂದ ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆದರೆ, ಕಾನ್ಪುರದಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಭಾರತೀಯ ಕಾಲಮಾನ ಬೆಳಗ್ಗೆ 9:30ಕ್ಕೆ ಉಭಯ ತಂಡಗಳ ನಡುವೆ ಪಂದ್ಯ ಆರಂಭವಾಗಲಿದೆ.
ಕಿವೀಸ್ ಎದುರು ಲಂಕಾ ಪ್ರಾಬಲ್ಯ
ಗುರುವಾರ ಆರಂಭವಾಗಿರುವ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ನಿನ್ನೆ (ಗುರುವಾರ) ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿದೆ. ಇಂದು (ಶುಕ್ರವಾರ) ಉಭಯ ತಂಡಗಳ ನಡುವೆ ಮಹಾಕದನ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಕಿವೀಸ್ ಎದುರು ಶ್ರೀಲಂಕಾ ಪ್ರಾಬಲ್ಯ ಸಾಧಿಸಿದೆ.
ಇಂಗ್ಲೆಂಡ್ vs ಆಸ್ಟ್ರೇಲಿಯಾ ಏಕದಿನ ಕದನ
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಏಕದಿನ ಪಂದ್ಯ ನಡೆಯಲಿದೆ. ಐದು ಪಂದ್ಯಗಳ ಏಕದಿನ ಸರಣಿಯ ನಾಲ್ಕನೇ ಪಂದ್ಯ ಇಂದು ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ಪ್ರವಾಸಿ ತಂಡ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಐತಿಹಾಸಿ ಲಾರ್ಡ್ಸ್ ಅಂಗಳದಲ್ಲಿ ಕಾಂಗೂರು ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ಇನ್ನೊಂದೆಡೆ ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯೂ ಆರಂಭವಾಗಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಅಬುಧಾಬಿಯಲ್ಲಿ ನಡೆಯಲಿದೆ.
ಸೆಪ್ಟೆಂಬರ್ 27ರ ನಾಲ್ಕು ಪಂದ್ಯಗಳ ವೇಳಾಪಟ್ಟಿ
ಭಾರತ vs ಬಾಂಗ್ಲಾದೇಶ ಟೆಸ್ಟ್ ಪಂದ್ಯ: ಬೆಳಗ್ಗೆ 9:30 ಗಂಟೆಗೆ
ಶ್ರೀಲಂಕಾ vs ನ್ಯೂಜಿಲೆಂಡ್ ಟೆಸ್ಟ್ ಪಂದ್ಯ: ಬೆಳಿಗ್ಗೆ 10 ಗಂಟೆಗೆ
ಇಂಗ್ಲೆಂಡ್ vs ಆಸ್ಟ್ರೇಲಿಯಾ ಏಕದಿನ ಪಂದ್ಯ : ಸಂಜೆ 5 ಗಂಟೆಗೆ
ಐರ್ಲೆಂಡ್ vs ದಕ್ಷಿಣ ಆಫ್ರಿಕಾ ಟಿ20 ಪಂದ್ಯ: ರಾತ್ರಿ 9 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications