ಕೋಲ್ಕತ್ತ: ಭರವಸೆಯ ಬ್ಯಾಟರ್ ಜಾರ್ಜ್ ಮುನ್ಸೆ ಬಾರಿಸಿದ ಅರ್ಧಶತಕ ಹಾಗೂ ಮೈಕೆಲ್ ಲೀಸ್ಕ್ ಅವರ ಭರ್ಜರಿ ಆಲ್‌ರೌಂಡರ್ ಬಲದಿಂದ ಸ್ಕಾಟ್ಲೆಂಡ್ ಟಿ20 ವಿಶ್ವಕಪ್‌ನ "ಸಿ" ಗುಂಪಿನ ಪಂದ್ಯದಲ್ಲಿ 73 ರನ್‌ಗಳಿಂದ ಇಟಲಿ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಜಾರ್ಜ್ ಮುನ್ಸೆ ಹಾಗೂ ಮೈಕೆಲ್ ಜೋನ್ಸ್ ಜೋಡಿ ಪವರ್ ಫುಲ್ ಆರಂಭವನ್ನು ನೀಡಿತು. ಇಟಲಿ ಬೌಲರ್‌ಗಳ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ 49 ರನ್ ಕಲೆ ಹಾಕಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕಲಿ ಇಟಲಿ ಬೌಲರ್‌ಗಳಿ ವಿಫಲರಾದರು.

ಜಾರ್ಜ್ ಮುನ್ಸೆ ಹಾಗೂ ಮೈಕೆಲ್ ಜೋನ್ಸ್ ಜೋಡಿ 13.5 ಓವರ್‌ಗಳಲ್ಲಿ 126 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ ಜಾರ್ಜ್ ಮುನ್ಸೆ 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ 84 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಸ್ಕಾಟ್ಲೆಂಡ್ ಪರ ಗರಿಷ್ಠ ರನ್ ದಾಖಲಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರು ಸ್ಕಾಟ್ಲೆಂಡ್ ಪರ 83 ಪಂದ್ಯಗಳನ್ನು ಆಡಿದ್ದು 31ರ ಸರಾಸರಿಯಲ್ಲಿ 2405 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಜಾರ್ಜ್ ಮುನ್ಸೆ ರಿಚೀ ಬೆರಿಂಗ್ಟನ್ (2392) ದಾಖಲೆಯನ್ನು ಅಳಿಸಿ ಹಾಕಿದರು.
ಇನ್ನೋಬ್ಬ ಆರಂಭಿಕ ಆಟಗಾರ ಮೈಕೆಲ್ ಜೋನ್ಸ್ ಆಟ ಸಹ 37 ರನ್‌ಗಳಿಗೆ ಕೊನೆಯಾಯಿತು. ಬ್ರಾಂಡನ್ ಮೆಕ್‌ಮುಲ್ಲೆನ್ 4 ಸಿಕ್ಸರ್ ಸಹಾಯದಿಂದ ಅಜೇಯ 41 ರನ್ ಸಿಡಿಸಿದರು. ಮೈಕೆಲ್ ಲೀಸ್ಕ್ ಜಸ್ಟ್ 5 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 22 ರನ್ ಬಾರಿಸಿದರು. ಅಂತಿಮವಾಗಿ ಸ್ಕಾಟ್ಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಸೇರಿಸಿತು.

ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಪಡೆದಿರುವ ಇಟಲಿ ತಂಡದ ಆರಂಭ ಕಳಪೆಯಾಗಿತ್ತು. ಜಸ್ಟಿನ್ ಮೊಸ್ಕಾ (0), ಆಂಥೋನಿ ಮೊಸ್ಕಾ (13), ಜೆಜೆ ಸ್ಮಟ್ಸ್ (22), ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಇಟಲಿ 4.4 ಓವರ್‌ಗಳಲ್ಲಿ 40 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
4ನೇ ವಿಕೆಟ್‌ಗೆ ಹ್ಯಾರಿ ಮಾನೆಂಟಿ ಮತ್ತು ಬೆನ್ ಮಾನೆಂಟಿ ಜೋಡಿ ಸ್ಕಾಟ್ಲೆಂಡ್ ತಂಡದ ಬೌಲರ್‌ಗಳ ಕೊಂಚ ಕಾಡಿತು. ಈ ಜೋಡಿ 46 ಎಸೆತಗಳಲ್ಲಿ 73 ರನ್ ಸೇರಿಸಿತು. ಬೆನ್ ಮಾನೆಂಟಿ 31 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 52 ರನ್ ಬಾರಿಸಿದರು. ಹ್ಯಾರಿ ಮಾನೆಂಟಿ 25 ಎಸೆತಗಳಲ್ಲಿ 37 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಇಟಲಿ 16.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಯಿತು.