
ನವದೆಹಲಿ, ಆಗಸ್ಟ್ 16: ವಿಶ್ವದ ಶ್ರೇಷ್ಠ ಓಪನಿಂಗ್ ಬ್ಯಾಟ್ಸ್‌ಮನ್‌ಗಳಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮುಂಚೂಣಿ ಸ್ಥಾನದಲ್ಲಿದ್ದಾರೆ. ರೋಹಿತ್‌ಗೆ ಆರಂಭಿಕರಾಗಿ ಬಡ್ತಿ ನೀಡಿದ್ದು ಮಾಜಿ ನಾಯಕ ಎಂಎಸ್ ಧೋನಿ. ಶನಿವಾರ (ಆಗಸ್ಟ್ 15) ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿ ಆಘಾತ ನೀಡಿದ ಧೋನಿಗೆ ರೋಹಿತ್ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಅಚಾನಕ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, 'ಕ್ರಿಕೆಟ್ ಇತಿಹಾಸದಲ್ಲಿ ನೀನೊಬ್ಬ ತುಂಬಾ ಪ್ರಭಾವಶಾಲಿ ವ್ಯಕ್ತಿ,' ಎಂದು ಬರೆದುಕೊಂಡಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟಿರುವ ಧೋನಿ ನಾಯಕತ್ವದಡಿಯಲ್ಲಿ 2013ರ ಚಾಂಪಿಯನ್ಸ್ ಟ್ರೋಫಿ ವೇಳೆ ರೋಹಿತ್ ಆರಂಭಿಕ ಸ್ಥಾನ ಆವರಿಸಿಕೊಂಡಿದ್ದರು.
ರೋಹಿತ್ ಮುಂದುವರೆದ ಟ್ವೀಟ್‌ನಲ್ಲಿ, 'ವಿಶ್ವ ಕ್ರಿಕೆಟ್‌ನಲ್ಲಿ ಅವನ (ಧೋನಿಯ) ಪರಿಣಾಮ ದೊಡ್ಡದು. ತಂಡವೊಂದನ್ನು ಹೇಗೆ ಕಟ್ಟಬೇಕೆನ್ನುವ ವಿಚಾರದಲ್ಲಿ ಆತನೊಬ್ಬ ದೃಷ್ಟಿಕೋನವುಳ್ಳ, ಜ್ಞಾನವುಳ್ಳ ಮೇರು ವ್ಯಕ್ತಿ. ಮೆನ್ ಇನ್ ಬ್ಲ್ಯೂನಲ್ಲಿ ನಾವು ಆತನನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಜೊತೆ ಯೆಲ್ಲೋ ಟೀಮ್ ಇದೆ. ಸೆಪ್ಟೆಂಬರ್ 19ಕ್ಕೆ ಟಾಸ್ ವೇಳೆ ನಿನ್ನನ್ನು ನೋಡುತ್ತೇನೆ,' ಬರೆದಿದ್ದಾರೆ.
2019ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ 19:29 ಗಂಟೆಗೆ ಟೂರ್ನಿಯಿಂದ ಹೊರ ಬಿದ್ದಿತ್ತು. ಭಾನುವಾರ ಇದೇ ಸಮಯಕ್ಕೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಧೋನಿ ಐಪಿಎಲ್‌ನಲ್ಲಿ ಮುಂದುವರೆಯಲಿದ್ದಾರೆ. ರೋಹಿತ್ ಹೇಳಿರುವ ಪ್ರಕಾರ, ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಎಂಐ ಕಾದಾಡಲಿವೆ.