ಭಾರತ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಮೂವರ ಹೆಸರು: ರೋಹಿತ್ ನಾಯಕನಾಗಲು ಇದೊಂದೇ ಅಡ್ಡಿ!

ಕಳೆದ ವರ್ಷ ಯುಎಇಯಲ್ಲಿ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ಸದ್ಯ ಟೀಮ್ ಇಂಡಿಯಾದ ಓರ್ವ ಸದಸ್ಯನಾಗಿ ಮಾತ್ರ ತಂಡದಲ್ಲಿದ್ದಾರೆ. ಹೌದು, ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ ವಿರಾಟ್ ಕೊಹ್ಲಿ ನಂತರ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ಕೆಳಗಿಳಿಸಲ್ಪಟ್ಟರು.
ಇತ್ತೀಚೆಗಷ್ಟೇ ಮುಗಿದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭಕ್ಕೂ ಮುನ್ನ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನೂತನ ನಾಯಕ ಎಂದು ಘೋಷಿಸಿತು. ಈ ಮೂಲಕ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ತಂಡಗಳಿಗೂ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೂಲಕ ತಂಡಕ್ಕೆ ಮರಳಿದ್ದು ಕೆರಿಬಿಯನ್ನರ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಏಕದಿನ ಹಾಗೂ ಟಿ ಟ್ವೆಂಟಿ ತಂಡಗಳ ನಾಯಕನ ಸ್ಥಾನಕ್ಕೆ ಎರಡನೇ ಆಯ್ಕೆಯ ಕುರಿತು ಚಿಂತಿಸದ ಬಿಸಿಸಿಐ ರೋಹಿತ್ ಶರ್ಮಾ ಹೆಗಲಿಗೆ ನೇರವಾಗಿ ನಾಯಕತ್ವದ ಹೊಣೆಯನ್ನು ಹಾಕಿತು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ತ್ಯಜಿಸಿದ್ದು, ಬಿಸಿಸಿಐ ಭಾರತ ಟೆಸ್ಟ್ ತಂಡದ ನೂತನ ನಾಯಕನನ್ನು ಇನ್ನೂ ಕೂಡ ಆಯ್ಕೆ ಮಾಡಿಲ್ಲ. ಈ ಕುರಿತಾಗಿ ಕೆಲ ಸುದ್ದಿಗಳು ಹರಿದಾಡುತ್ತಿದ್ದು ರೋಹಿತ್ ಶರ್ಮಾ ಅವರೇ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಸರಣಿಗಳು ಮುಗಿದ ನಂತರ ಮಾರ್ಚ್ ಮೊದಲನೇ ವಾರದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ನಡೆಯಲಿದ್ದು, ಈ ಟೆಸ್ಟ್ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡದ ನೂತನ ನಾಯಕನ ಹೆಸರು ಬಹಿರಂಗವಾಗಲಿದೆ. ಇನ್ನು ರೋಹಿತ್ ಶರ್ಮಾ ಸೇರಿದಂತೆ ಒಟ್ಟು 3 ಆಟಗಾರರ ಹೆಸರು ಭಾರತ ಟೆಸ್ಟ್ ತಂಡದ ನೂತನ ನಾಯಕ ಸ್ಥಾನಕ್ಕೆ ಹರಿದಾಡುತ್ತಿದ್ದು, ಈ ಮೂವರಲ್ಲಿ ಯಾರು ನಾಯಕನಾಗಲಿದ್ದಾರೆ ಎಂಬುದರ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಟೆಸ್ಟ್ ನಾಯಕನ ಸ್ಥಾನಕ್ಕೆ ಹರಿದಾಡುತ್ತಿದೆ ಮೂವರ ಹೆಸರು
ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ ನಂತರ ಆ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರು ಎಂಬ ಪ್ರಶ್ನೆಗಳು ಎದುರಾಗಿತ್ತು. ಹಾಗೂ ಈ ಸ್ಥಾನಕ್ಕೆ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಈ ಮೂವರು ಆಟಗಾರನ ಹೆಸರು ಹೆಚ್ಚಾಗಿ ಕೇಳಿ ಬಂದಿತ್ತು.

ರೋಹಿತ್ ಶರ್ಮಾ ನಾಯಕನಾಗಲು ಇದನ್ನು ಪೂರೈಸಲೇಬೇಕು
ಇನ್ನು ಭಾರತ ಸೀಮಿತ ಓವರ್ ತಂಡಗಳ ನಾಯಕತ್ವವನ್ನು ವಹಿಸಿಕೊಂಡಿರುವ ರೋಹಿತ್ ಶರ್ಮಾ ಹೆಗಲಿಗೆ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಹಾಕುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಗಾಯದ ಸಮಸ್ಯೆಗೆ ಒಳಗಾಗಿ ಹೊರಬಿದ್ದಿದ್ದ ರೋಹಿತ್ ಶರ್ಮಾಗೆ ತೂಕ ಇಳಿಸಿಕೊಂಡು ಫಿಟ್ ಆದರೆ ಮಾತ್ರ ತಂಡದಲ್ಲಿ ಸ್ಥಾನ ಎಂದು ಆಯ್ಕೆ ಸಮಿತಿ ತಾಕೀತು ಮಾಡಿತ್ತು. ಅದರಂತೆ ಬರೋಬ್ಬರಿ 8 ಕೆಜಿ ತೂಕ ಇಳಿಸಿಕೊಂಡಿರುವ ರೋಹಿತ್ ಶರ್ಮಾ ತಂಡದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಸದ್ಯ ತಂಡಕ್ಕೆ ಮರಳಿದ ರೋಹಿತ್ ಶರ್ಮಾ ವಿಂಡೀಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದು, ಮುಂದಿನ ದಿನಗಳಲ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬೇಕಿದ್ದರೆ ಮತ್ತೊಂದು ಫಿಟ್‌ನೆಸ್ ಪರೀಕ್ಷೆ ಎದುರಿಸಬೇಕಾದ ಅನಿವಾರ್ಯತೆಯಿದೆ. ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನವೇ ಮಾತನಾಡಿದ್ದ ರೋಹಿತ್ ಶರ್ಮಾ ಸೀಮಿತ ಓವರ್ ತಂಡಗಳ ನಾಯಕತ್ವ ನಿರ್ವಹಿಸುವುದಕ್ಕೆ ಖುಷಿ ವ್ಯಕ್ತಪಡಿಸಿದ್ದರು ಹಾಗೂ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳುವತ್ತ ಯಾವುದೇ ಚಿಂತನೆ ನಡೆಸಿಲ್ಲ ಎಂದೂ ಸಹ ರೋಹಿತ್ ಶರ್ಮಾ ತಿಳಿಸಿದ್ದರು. ಹೀಗೆ ಭಾರತ ಟೆಸ್ಟ್ ತಂಡದ ನಾಯಕನಗಲು ರೋಹಿತ್ ಶರ್ಮಾಗೆ ಫಿಟ್‌ನೆಸ್ ಅಡ್ಡಿಯನ್ನುಂಟುಮಾಡುತ್ತಾ ಅಥವಾ ರೋಹಿತ್ ಶರ್ಮಾ ಅವರೇ ಸ್ವತಃ ಹಿಂದೆ ಸರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಿಗೆ ನಾಯಕತ್ವ ಸಿಗುವುದರಲ್ಲಿ ಅನುಮಾನವೇಕೆ?
ಮತ್ತೊಂದೆಡೆ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಹೆಗಲಿಗೆ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಹಾಕುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಕೆಎಲ್ ರಾಹುಲ್ ನಾಯಕನಾಗಿ ತೋರಿರುವ ಕಳಪೆ ಪ್ರದರ್ಶನ ಮತ್ತು ರಿಷಭ್ ಪಂತ್ ನಾಯಕತ್ವವನ್ನು ನಿಭಾಯಿಸಬಲ್ಲಷ್ಟು ಅನುಭವ ಹೊಂದಿರದೇ ಇರುವುದು ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications