IND-W vs SA-W: ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಶಫಾಲಿ; ಮುಂದುವರೆದ ಮಂಧಾನ ದರ್ಬಾರ್
ಜೂನ್ 28 ಶುಕ್ರವಾರ, ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ದಕ್ಷಿಣ ಆಫ್ರಿಕಾ ನಡುವೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿದೆ.
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಸಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಟೀಮ್ ಇಂಡಿಯಾದ ಆರಂಭಿಕ ಜೋಡಿ ನಾಯಕಿಯ ನಿರೀಕ್ಷೆಗೆ ತಕ್ಕಂತೆ ಅದ್ಭುತವಾಗಿ ಆಡಿದರು.

ಆರಂಭಿಕರಾಗಿ ಕಣಕ್ಕೀಳಿದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪರಿಣಾಮ ಇಬ್ಬರು ಅಮೋಘ ಶತಕಗಳನ್ನು ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದರು.
ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ದಾಖಲೆಗಳು
ಆರಂಭಿಕ ಜೋಡಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಚೆನ್ನೈನ ಚೆಪಾಕ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದರು. ಶಫಾಲಿ ಮತ್ತು ಮಂದಾನ ಜೋಡಿ ದಾಖಲೆಯ ಜೊತೆಯಾಟವಾಡಿದರು. ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ (298) ಅಧಿಕ ರನ್‌ಗಳ ಜೊತೆಯಾಟವಾಡಿದ ಮೊದಲ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಪಾತ್ರರಾದರು.
ಸ್ಮೃತಿ ಮಂಧಾನ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಕಾಯ್ದುಕೊಂಡು ಟೆಸ್ಟ್ ವೃತ್ತಿಜೀವನದಲ್ಲಿ ಎರಡನೇ ಶತಕ ಗಳಿಸಿದರು. ಮಂಧಾನ 122 ಎಸೆತಗಳಲ್ಲಿ 19 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು.
ಈ ಶತಕದೊಂದಿಗೆ ಹೇಮಲತಾ ಕಲಾ ಅವರ ದಾಖಲೆಯನ್ನು ಮಂಧಾನ ಸರಿಗಟ್ಟಿದರು. ಸಂಧ್ಯಾ ಅಗರ್ವಾಲ್ ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಇವರ ಹೆಸರಿನಲ್ಲಿ 4 ಶತಕಗಳು ದಾಖಲಾಗಿವೆ. ಅಂತಿಮವಾಗಿ ಸ್ಮೃತಿ ಮಂಧಾನ 161 ಎಸೆತಗಳಲ್ಲಿ 1 ಸಿಕ್ಸರ್ ಹಾಗು 27 ಬೌಂಡರಿ ಮೂಲಕ 149 ರನ್‌ಗಳನ್ನು ಕಲೆಹಾಕಿ ಔಟಾದರು.
ಶಫಾಲಿ ವರ್ಮಾ ಚೊಚ್ಚಲ ಶತಕ
5 ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಭಾರತದ ಬಲಗೈ ಸ್ಪೋಟಕ ಬ್ಯಾಟರ್ ಶೆಫಾಲಿ ವರ್ಮಾ ಹರಿಣಗಳ ಪಡೆಯ ಬೌಲರ್‌ಗಳನ್ನು ದಂಡಿಸಿದರು. ಮೈದಾನದ ಎಲ್ಲೆಡೆ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು.
ಈ ಮೂಲಕ ಕೇವಲ 113 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಶಫಾಲಿ ಮಿಂಚಿದರು. ಮಂಧಾನ ವಿಕೆಟ್ ಕಳೆದುಕೊಂಡಾಗ ಶೆಫಾಲಿ ಅಜೇಯ 143 ರನ್ ಗಳಿಸಿ ಕ್ರೀಸ್‌ನಲ್ಲಿದರು. ಇದಾದ ನಂತರವೂ ಅಬ್ಬರಿಸಿದ ಶಫಾಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಬಾರಿಸಿ ದಾಖಲೆ ಮಾಡಿದರು.
ಶಫಾಲಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ದ್ವಿಶತಕವನ್ನು ಕೇವಲ 194 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ವರ್ಮಾ 197 ಎಸೆತಗಳಲ್ಲಿ 23 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 205 ರನ್ ಗಳಿಸಿದರು. ಇದಾದ ಬಳಿಕ ದುರದೃಷ್ಟವಶಾತ್ ರನ್ ಔಟ್ ಆಗಿ ಪೆವಿಲಿಯನ್‌ಗೆ ಮರಳಿದರು.
ದ್ವಿಶತಕ ಬಾರಿಸಿದ ಭಾರತದ ಎರಡನೇ ಮಹಿಳಾ ಆಟಗಾರ್ತಿ
ದಕ್ಷಿಣ ಆಫ್ರಿಕಾ ವಿರುದ್ಧ 205 ರನ್‌ಗಳ ಇನಿಂಗ್ಸ್ ಆಡಿದ ಶೆಫಾಲಿ ವರ್ಮಾ, ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು. ಇದಕ್ಕೂ ಮುನ್ನ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ 22 ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದರು.
ಭಾರತದ ಪರ ಟೆಸ್ಟ್‌ನಲ್ಲಿ ಎರಡನೇ ಅಧಿಕ ವೈಯಕ್ತಿಕ ಸ್ಕೋರ್
ದಕ್ಷಿಣ ಆಫ್ರಿಕಾ ವಿರುದ್ಧದ 205 ರನ್‌ಗಳು ಶಫಾಲಿ ವರ್ಮಾ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದೆ. ಅಲ್ಲದೆ ಟೀಮ್ ಇಂಡಿಯಾ ಪರ ಎರಡನೇ ಅತ್ಯುತ್ತಮ ಸ್ಕೋರ್ ಕಲೆ ಹಾಕಿದ ಆಟಗಾರ್ತಿಯಾಗಿದರು. ಮಿಥಾಲಿ ರಾಜ್ 2002ರಲ್ಲಿ ಇಂಗ್ಲೆಂಡ್ ವಿರುದ್ಧ 214 ರನ್ ಗಳಿಸಿದ್ದರು. ಶೆಫಾಲಿ ತನ್ನ ಹೆಸರಿನಲ್ಲಿದ್ದ ಈ ದೊಡ್ಡ ದಾಖಲೆಯನ್ನು ಕೇವಲ 9 ರನ್‌ಗಳಿಂದ ತಪ್ಪಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications