ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಶೆಫಾಲಿ ವರ್ಮಾ ಕಳೆದ ಕೆಲವು ಸಮಯದಿಂದ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇವರ ಸ್ಥಿರ ಪ್ರದರ್ಶನದಿಂದ ಭಾರತ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಜಯ ಸಾಧಿಸಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಶೆಫಾಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆರ್ಭಟಿಸಿದರು. ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಆಟಗಾರ್ತಿ ಎಂಬ ಗೌರವ ಸಹ ಸಿಕ್ಕಿತು. ಈಗ ಇವರ ಮುಡಿಗೆ ಐಸಿಸಿ ಪ್ರಶಸ್ತಿ ಸಹ ಸಂದಿದೆ.
ಐಸಿಸಿ ಪ್ರತಿ ತಿಂಗಳು ನೀಡುವ ತಿಂಗಳು ಆಟಗಾರ್ತಿ ಪ್ರಶಸ್ತಿಯನ್ನು ಶೆಫಾಲಿ ತಮ್ಮದಾಗಿಸಿಕೊಂಡಿದ್ದಾರೆ. ಇವರು ನವೆಂಬರ್‌ನಲ್ಲಿ ನೀಡಿದ ಪ್ರದರ್ಶನ ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 78 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ 87 ರನ್ ಬಾರಿಸಿ ಅಬ್ಬರಿಸಿದ್ದರು. ಇವರು ಬೌಲಿಂಗ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದರು. ಅಲ್ಲದೆ 36 ರನ್ ನೀಡಿ 2 ವಿಕೆಟ್ ಉರುಳಿಸಿದರು. ಇವರ ಈ ಆಟಕ್ಕೆ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು.

"ಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಶ್ರಮಿಸಿದ್ದು ಖುಷಿ ನೀಡಿದೆ. ಐಸಿಸಿ ತಿಂಗಳು ಆಟಗಾರ್ತಿ ಪ್ರಶಸ್ತಿ ನೀಡಿದ್ದೂ ಸಹ ಗೌರವ ಹೆಚ್ಚಿಸಿದೆ. ಈ ಪ್ರಶಸ್ತಿಯನ್ನು ನನ್ನ ತಂಡದ ಸದಸ್ಯರು, ತರಬೇತುದಾರರು, ಕುಟುಂಬ ಮತ್ತು ಇಲ್ಲಿಯವರೆಗೆ ನನ್ನ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ಅರ್ಪಿಸುತ್ತೇನೆ" ಎಂದು ಶೆಫಾಲಿ ತಿಳಿಸಿದ್ದಾರೆ.
ಶೆಫಾಲಿ ವರ್ಮಾ ಮೂರು ಮಾದರಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರ್ತಿ. ಇವರು ಆರಂಭದಲ್ಲಿ ಮಹಿಳಾ ಏಕದಿನ ವಿಶ್ವಕಪ್‌ನ ಭಾಗವಾಗಿರಲಿಲ್ಲ. ನಾಕೌಟ್ ಹಂತದ ವೇಳೆಗೆ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಅವರಿಗೆ ಗಾಯವಾಗಿದ್ದು, ಸರಣಿಯಿಂದ ಹೊರ ಹೋಗಬೇಕಾಯಿತು. ಹೀಗಾಗಿ ಆರಂಭಿಕ ಸ್ಥಾನಕ್ಕಾಗಿ ಶೆಫಾಲಿ ಅವರನ್ನು ಆಯ್ಕೆ ಮಾಡಲಾಯಿತು. ಶೆಫಾಲಿ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 1 ಶತಕ ಹಾಗೂ 3 ಅರ್ಧಶತಕ ಸೇರಿದಂತೆ ಒಟ್ಟು 567 ರನ್ ಕಲೆ ಹಾಕಿದ್ದಾರೆ. ಇನ್ನು 31 ಏಕದಿನ ಪಂದ್ಯಗಳಲ್ಲಿ 5 ಅರ್ಧಶತಕದ ಸಹಾಯದಿಂದ 741 ರನ್ ಸಿಡಿಸಿದ್ದಾರೆ. ಚುಟುಕು ಫಾರ್ಮೆಟ್‌ನಲ್ಲಿ 90 ಪಂದ್ಯ ಆಡಿದ್ದು, 26ರ ಸರಾಸರಿಯಲ್ಲಿ 2221 ರನ್ ಬಾರಿಸಿದ್ದಾರೆ.