ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಈ ವೇಳೆ ವಿಶ್ವದ ನಾನಾ ತಂಡಗಳ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತದ ಆಟಗಾರರು ಸಹ ಈ ಟೂರ್ನಿಯಲ್ಲಿ ಆರ್ಭಟ ನಡೆಸಿದ್ದಾರೆ. ಇತ್ತಿಚಿಗೆ ಯಜುವೇಂದ್ರ ಚಹಾಲ್ ಐದು ವಿಕೆಟ್ ಪಡೆದು ಸುದ್ದಿ ಮಾಡಿದ್ದರು. ಈಗ ಬೇರೆ ದೇಶದ ಆಟಗಾರನೊಬ್ಬ ಮತ್ತೆ ಸುದ್ದಿ ಮಾಡಿದ್ದಾನೆ.
ಈತ್ತೀಚಿಗೆ ಬಾಂಗ್ಲಾದೇಶ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿತ್ತು. ಪಾಕ್ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವಿನ ನಗೆ ಬೀರಿರುವ ಬಾಂಗ್ಲಾ ತಂಡ ಇದೀಗ ಭಾರತದ ವಿರುದ್ಧ ಟೆಸ್ಟ್ ಆಡಲಿದೆ. ಪಾಕ್ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸರಣಿ ಗೆಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅನುಭವಿ ಆಟಗಾರನ, ಈಗ ಕೌಂಟಿಯಲ್ಲೂ ಆರ್ಭಟ ನಡೆಸಿದ್ದಾನೆ. ಅಲ್ಲದೆ ಪಾಕ್ ಸರಣಿಯನ್ನು ಆಡುವಾಗಲೇ ಇವರ ಮೇಲೆ ಕೊಲೆ ಕೇಸ್ ದಾಖಲಾಗಿತ್ತು.

ಪಾಕ್ ವಿರುದ್ಧ ಮಿಂಚಿರುವ ಆಟಗಾರ ಬೇರೆ ಯಾರು ಅಲ್ಲ ಶಕೀಬ್ ಅಲ್ ಹಸನ್. ಬಾಂಗ್ಲಾ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಸದ್ಯ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಈ ವೇಳೆ ಶಕೀಬ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಮಾಡಿದ್ದಾರೆ. 106 ಪಂದ್ಯಗಳನ್ನು ಆಡಿರುವ ಶಕೀಬ್ ಮಾಡಿರುವ ದಾಖಲೆ ನಿಜಕ್ಕೂ ಅವರ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿ.
ಶಕೀಬ್ ಅಲ್ ಹಸನ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಸೋಮರ್‌ಸೆಟ್ ಮತ್ತು ಸರ್ರೆ ನಡುವಿನ ಪಂದ್ಯಕ್ಕೂ ಮುನ್ನ 342 ವಿಕೆಟ್‌ಗಳನ್ನು ಪಡೆದಿದ್ದರು. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್, ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಈ ಮೂಲಕ ಶಕೀಬ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಗಡಿ ಮುಟ್ಟಿದ್ದಾರೆ. ಇವರ ಅಮೋಘ ಬೌಲಿಂಗ್ ದಾಳಿಗೆ ಸೋಮರ್‌ಸೆಟ್‌ನ ಎರಡನೇ ಇನ್ನಿಂಗ್ಸ್ ಕೇವಲ 224 ರನ್‌ಗಳಿಗೆ ಕುಸಿಯಿತು.
ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಹಿಂಸಾಚಾರ ಭುಗಿಲೆದ್ದಿತು. ಈ ವೇಳೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದಿತ್ತು. ಈ ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ವಿದ್ಯಾರ್ಥಿಯ ತಂದೆ ರಫೀಕುಲ್ ಇಸ್ಲಾಂ 156 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಅದರಲ್ಲಿ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ, ಬಿಸಿಬಿ ಮುಖ್ಯಸ್ಥ ನಜ್ಮುಲ್ ಹಸನ್ ಹಾಗೂ ಶಕೀಬ್ ಸೇರಿದಂತೆ ಮೊದಲಾದ ಖ್ಯಾತ ನಾಮರ ಹೆಸರುಗಳಿವೆ.

ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹೇಳಿಕೆಯನ್ನು ನೀಡಿದೆ. ಮಂಡಳಿ ನೀಡಿರುವ ಹೇಳಿಕೆಯಲ್ಲಿ, ಶಕೀಬ್ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ. ಆದರೆ ಅವರು ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ಮುಂದುವರೆಸಲಿದ್ದಾರೆ. ಶಕೀಬ್ ವಿರುದ್ಧದ ಆರೋಪಗಳು ಸಾಬೀತಾಗುವವರೆಗೆ ಅವರನ್ನು ಆಡುವುದನ್ನು ನಿಲ್ಲಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಶಕೀಬ್ ಅಲ್ ಹಸನ್ ಕೂಡ ಸ್ಥಾನ ಪಡೆದಿದ್ದಾರೆ.