Shakib Al Hasan: ತವರಿನಲ್ಲಿ ವಿದಾಯ ಪಂದ್ಯ ಆಡುವ ಶಕೀಬ್ ಕನಸಿಗೆ ಪೆಟ್ಟು
ಟೆಸ್ಟ್ ಮತ್ತು ಟಿ20 ಸರಣಿಗಳನ್ನು ಆಡಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಬಾಂಗ್ಲಾದೇಶ ತಂಡದ ಸ್ಟಾರ್ ಆಲ್‌ರೌಂಡರ್ ಹಾಗು ಮಾಜಿ ನಾಯಕ ಶಕೀಬ್ ಅಲ್ ಹಸನ್ ನಿವೃತ್ತಿ ಘೋಷಿಸಿದ್ದರು.
ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಾದರೆ ಬಾಂಗ್ಲಾದೇಶದಿಂದ ಸುರಕ್ಷಿತವಾಗಿ ತಮ್ಮ ಕುಟುಂಬ ಸಮೇತರಾಗಿ ಹೊರಬರುವ ಭರವಸೆ ನೀಡಿದರೆ ಮಾತ್ರ ಆಡುವುದಾಗಿ ಹೇಳಿದ್ದರು. ಇಲ್ಲದಿದ್ದರೆ ಕಾನ್ಪುರ ಗ್ರೀನ್ ಪಾರ್ಕ್‌ನಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್ ಪಂದ್ಯ ತಮ್ಮ ವೃತ್ತಿಜೀವನದ ಕೊನೆ ಪಂದ್ಯ ಎಂದು ಶಕೀಬ್ ಹೇಳಿದ್ದರು.

ಇದೀಗ ಮಿರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಶಕೀಬ್ ಅಲ್ ಹಸನ್ ಹೊರಗುಳಿಯಲಿದ್ದಾರೆ. ಶುಕ್ರವಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅನುಭವಿ ಆಲ್‌ರೌಂಡರ್ ಬದಲಿಗೆ ಎಡಗೈ ಸ್ಪಿನ್ನರ್ ಹಸನ್ ಮುರಾದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇತ್ತ ತವರಿನಲ್ಲಿ ವಿದಾಯದ ಪಂದ್ಯ ಆಡುವ ಕನಸು ಕಾಣುತ್ತಿದ್ದ ಶಕೀಬ್ ಅಲ್ ಹಸನ್ ಅವರಿಗೆ ನಿರಾಸೆ ಆಗಿದೆ.
ಶಕೀಬ್ ಅಲ್ ಹಸನ್ ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದು, ಢಾಕಾಗೆ ಹೋಗುವುದು ಸುಲಭದ ಮಾತಲ್ಲ. ಏಕೆಂದರೆ ಮೀಸಲಾತಿ ವಿಚಾರವಾಗಿ ಶುರುವಾದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಪರ ಶಕೀಬ್ ತಮ್ಮ ನಿಲುವನ್ನು ವ್ಯಕ್ತಪಡಿಸಲಿಲ್ಲ. ಇದಕ್ಕಾಗಿ ಅವರ ವಿರುದ್ಧ ಬಾಂಗ್ಲಾದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದಾದ ನಂತರ ಅವರು ಕ್ಷಮೆಯಾಚಿಸಿದ್ದರು. ಆದರೂ ಇಂತಹ ಪರಿಸ್ಥಿತಿಯಲ್ಲಿ ಅವರು ಬಾಂಗ್ಲಾದೇಶಕ್ಕೆ ಮರಳುವುದು ಸಮಸ್ಯೆಯಲ್ಲ. ಆದರೆ ಅಲ್ಲಿಂದ ಹೊರಬರುವುದು ದೊಡ್ಡ ಸಮಸ್ಯೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಶಕೀಬ್ ಬದಲಿಗೆ ಹಸನ್ ಮುರಾದ್ ಅವರಿಗೆ ಬಿಸಿಬಿ ಅವಕಾಶ ನೀಡಿದೆ.
ಹಸನ್ ಮುರಾದ್ ವೃತ್ತಿಜೀವನ
ಶಕೀಬ್ ಬದಲಿಗೆ ಅನ್ ಕ್ಯಾಪ್ಡ್ ಟೆಸ್ಟ್ ಆಟಗಾರ ಹಸನ್ ಮುರಾದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಸಿಬಿ ಖಚಿತಪಡಿಸಿದೆ. ಮುರಾದ್ 2021ರಿಂದ 30 ಪ್ರಥಮ ದರ್ಜೆ ಪಂದ್ಯಗಳಲ್ಲಿ 136 ವಿಕೆಟ್ ಪಡೆದಿದ್ದಾರೆ. 2023ರ ಏಷ್ಯನ್ ಗೇಮ್ಸ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದು, ಇದುವರಗೆ ಬಾಂಗ್ಲಾ ಪರ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.
ಟೆಸ್ಟ್ ಸರಣಿ ಯಾವಾಗ?
ಢಾಕಾದ ಮೀರ್‌ಪುರದಲ್ಲಿರುವ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅಕ್ಟೋಬರ್ 21 ರಿಂದ 25 ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳು ಅಕ್ಟೋಬರ್ 29 ರಿಂದ ನವೆಂಬರ್ 2 ರವರೆಗೆ ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications