
ಧಾಕಾ, ಅಕ್ಟೋಬರ್ 29: ಬಾಂಗ್ಲಾದೇಶದ ಆಲ್ ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ಅವರನ್ನು ಬಾಂಗ್ಲಾ ಅಭ್ಯಾಸದಿಂದ ಹೊರಗಿಡಲಾಗಿದೆ. ಹೀಗಾಗಿ ಭಾರತಕ್ಕೆ ಬಾಂಗ್ಲಾದೇಶ ಪ್ರವಾಸ ಸರಣಿಯಲ್ಲಿ ಶಕೀಬ್ ಪಾಲ್ಗೊಳ್ಳೋದು ಅನುಮಾನವೆನಿಸಿದೆ. ನವೆಂಬರ್ 3ರಿಂದ ಪ್ರವಾಸ ಸರಣಿ ಆರಂಭವಾಗುವುದರಲ್ಲಿದೆ.
ಸ್ಥಳೀಯ ಮಾಧ್ಯಮಗಳಲ್ಲಿನ ವರದಿಯ ಪ್ರಕಾರ ಶಕೀಬ್ ಅಲ್ ಹಸನ್ ಅವರಿಗೆ ಬುಕ್ಕಿಯಿಂದ ಆಫರ್ ಬಂದಿತ್ತು. ಆದರೆ ಶಕೀಬ್ ಇದನ್ನು ಐಸಿಸಿಯ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ತಿಳಿಸಿರಲಿಲ್ಲ. ಈ ಪ್ರಕರಣ ಶಕೀಬ್‌ಗೆ ಮುಳ್ಳಾಗುವುದರಲ್ಲಿದೆ ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ ಬಾಂಗ್ಲಾ ಕ್ರಿಕೆಟಿಗರು ವಿವಿಧ ಬೇಡಿಕೆಗಳನ್ನಿಟ್ಟು ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ವಿರುದ್ಧ ಮುಷ್ಕರ ಹೂಡಿದ್ದರು. ಶಕೀಬ್ ಮುಂದಾಳತ್ವದಲ್ಲಿ ಮುಷ್ಕರ ನಡೆಸಿದ್ದ ಅನೇಕ ಪ್ರಮುಖ ಆಟಗಾರರು ಬೇಡಿಕೆ ಈಡೇರಿಸದ ಹೊರತಾಗಿ ಬೋರ್ಡ್‌ನ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದರು.
ಬಿಸಿಬಿ ಬೇಡಿಕೆ ಈಡೇರಿಸುವ ಭರವಸೆ ನೀಡಿರುವುದರಿಂದ ಮುಷ್ಕರ ಅಂತ್ಯಗೊಂಡಿದೆ. ಬಾಂಗ್ಲಾ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವುದು ಖಾತ್ರಿಯಾಗಿದೆ. ಆದರೆ ತಂಡದ ಪ್ರಮುಖ ಆಟಗಾರ ಶಕೀಬ್ ಆಡೋ ಸಾಧ್ಯತೆ ತುಂಬಾ ಕಡಿಮೆಯಿದೆ. ಬ್ಯಾನ್ ಕಾರಣಕ್ಕಾಗಿಯೇ ಶಕೀಬ್ ಅವರನ್ನು ಅಭ್ಯಾಸದಿಂದ ಹೊರಗಿಡಲಾಗಿದೆ ಎನ್ನಲಾಗುತ್ತಿದೆ.
'ಐಸಿಸಿ ಒತ್ತಾಯದ ಮೇರೆಗೆ ಬಿಸಿಬಿ ಶಕೀಬ್ ಅವರನ್ನು ಅಭ್ಯಾಸದಿಂದ ಹೊರಗಿಟ್ಟಿದೆ. ಹೀಗಾಗಿ ಶಕೀಬ್ ಪಿಂಕ್ ಬಾಲ್ ಟೆಸ್ಟ್‌ಗೆ ಸಂಬಂಧಿಸಿದ ಸಭೆಯಲ್ಲೂ ಪಾಲ್ಗೊಂಡಿಲ್ಲ,' ಎಂದು ಬಾಂಗ್ಲಾದ ಮುಂಚೂಣಿ ಪತ್ರಿಕೆ 'ಸಮಕಾಲ್' ವರದಿಯಲ್ಲಿ ತಿಳಿಸಿದೆ. ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ಬಾಂಗ್ಲಾ, ಭಾರತದ ವಿರುದ್ಧ 3 ಟಿ20, 2 ಟೆಸ್ಟ್ ಪಂದ್ಯಗಳನ್ನಾಡಲಿದೆ.