2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಸಂತಸ ಮನೆ ಮಾಡಿದೆ. ಈವರೆಗೆ ನಡೆದಿರುವ ಎಲ್ಲಾ ಟಿ20 ವಿಶ್ವಕಪ್‌ಗಳನ್ನು ಆಡಿರುವ ಇಬ್ಬರು ಆಟಗಾರರಲ್ಲಿ ಒಬ್ಬರಾದ ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್ 10 ತಿಂಗಳ ನಂತರ ತಂಡಕ್ಕೆ ಮರಳಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿಟ್ಟರೆ ಎಲ್ಲಾ ಟಿ20 ವಿಶ್ವಕಪ್‌ಗಳನ್ನು ಆಡಿರುವ ಬಾಂಗ್ಲಾ ಸ್ಪಿನ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ 10 ತಿಂಗಳ ನಂತರ ತಂಡಕ್ಕೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ. ಟಿ20 ವಿಶ್ವಕಪ್ ಪ್ರಾರಂಭವಾಗುವುದಕ್ಕೂ ಮೊದಲು ಶಕೀಬ್ ಬಾಂಗ್ಲಾ ತಂಡವನ್ನು ಸೇರ್ಪಡೆಯಾಗುತ್ತಿರುವುದು ಸಹಾ ಆಟಗಾರರಲ್ಲಿ ಉತ್ಸಾಹ ಹೆಚ್ಚಿಸಿದೆ.

2023ರ ಜುಲೈನಲ್ಲಿ ಸ್ವದೇಶದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ದದ ಟಿ20 ಸರಣಿಯನ್ನು ಕೊನೆಯ ಬಾರಿಗೆ ಶಕೀಬ್ ಆಡಿದ್ದರು. ಇದೀಗ ಜಿಂಬಾಬ್ವೆ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳಿಗಾಗಿ ಬಾಂಗ್ಲಾ ತಂಡಕ್ಕೆ ಆಯ್ಕೆಯಾಗಿದ್ದಾರೆ . ಜಿಂಬಾಬ್ವೆ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ .
ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವಾಗ ಶಕೀಬ್ ಟಿ20 ಕ್ರಿಕೆಟ್‌ಗೆ ಮರಳಿರುವುದು ಬಾಂಗ್ಲಾ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಶಕೀಬ್ 2007ರ ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲಿ ಬಾಂಗ್ಲಾ ಪರ ಕಣಕ್ಕೀಳಿದಿದ್ದು, ಇಲ್ಲಿಯವರೆಗಿನ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಂಡ ಕೆಲವೇ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಒಂದು ವೇಳೆ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೆ ಶಕೀಬ್ ಅತ್ಯಂತ ಅನುಭವಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಶಕೀಬ್ ಈವರೆಗೆ 115 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 2382 ರನ್ ಗಳಿಸಿ, 140 ವಿಕೆಟ್ ಪಡೆದಿದ್ದಾರೆ.
ಜಿಂಬಾಬ್ವೆ ವಿರುದ್ಧ ನಡೆಯಲಿರುವ ಅಂತಿಮ ಎರಡು ಟಿ20 ಪಂದ್ಯಗಳು ಮೇ 10 ಮತ್ತು 12 ರಂದು ಮೀರ್‌ಪುರದಲ್ಲಿ ನಡೆಯಲಿವೆ. ಈ ಎರಡು ಪಂದ್ಯಗಳಿಗೆ ಬಾಂಗ್ಲಾದೇಶದ ಸಂಭಾವ್ಯ ತಂಡ ಹೀಗಿದೆ.
ಬಾಂಗ್ಲಾದೇಶ ತಂಡ : ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಲಿಟ್ಟನ್ ಕುಮರ್ ದಾಸ್, ತನ್ಜಿದ್ ಹಸನ್ ತಮೀಮ್, ಶಕೀಬ್ ಅಲ್ ಹಸನ್ , ತೌಹಿದ್ ಹೃದಯ್, ಮಹ್ಮದ್ ಉಲ್ಲಾ, ಜೇಕರ್ ಅಲಿ ಅನಿಕ್, ಶಾಕ್ ಮಹೇದಿ ಹಸನ್, ರಿಶಾದ್ ಮುಸ್ತಾಫ್, ತಾಸ್, ಮುಸ್ತಾಫ್ ಅಹ್ಮದ್, ತಾಸ್. ತಂಜಿಮ್ ಹಸನ್ ಸಾಕಿಬ್, ಸೌಮ್ಯ ಸರ್ಕಾರ್, ತನ್ವಿರ್ ಇಸ್ಲಾಂ, ಶೈಫ್ ಉದ್ದೀನ್.