
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೂ ಕಳಪೆ ಪ್ರದರ್ಶನ ನೀಡಿದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಮೊದಲಿಗೆ ತಂಡದ ಉಪನಾಯಕನ ಸ್ಥಾನವನ್ನು ಕಳೆದುಕೊಂಡ ಕೆಎಲ್ ರಾಹುಲ್ ನಂತರ ಆಡುವ ಬಳಗದಿಂದಲೂ ಹೊರಬಿದ್ದರು. ಇದೀಗ ಕೆಎಲ್ ರಾಹುಲ್ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳು ಏಳಲು ಆರಂಭಿಸಿದೆ. ಅಲ್ಲದೆ ಯುವ ಆಟಗಾರ ಶುಬ್ಮನ್ ಗಿಲ್ ಅಂತಿಮ ಟೆಸ್ಟ್‌ನಲ್ಲಿ ಶತಕವನ್ನು ಸಿಡಿಸಿ ಗಮನ ಸೆಳೆದಿದ್ದು ರಾಹುಲ್ ಸ್ಥಾನಕ್ಕೆ ಮತ್ತೊಮ್ಮೆ ಗಿಲ್ ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ.
ಅಹ್ಮದಾಬಾದ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಗಮನಸೆಳೆದಿದ್ದಾರೆ. ಹೀಗಾಗಿ ಟೆಸ್ಟ್ ಮಾದರಿಯಲ್ಲಿ ಕೆಎಲ್ ರಾಹುಲ್ ಕಮ್‌ಬ್ಯಾಕ್ ಹಾದಿ ಮತ್ತಷ್ಟು ದುರ್ಗಮವಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಆಟಗಾರ ಶೇನ್ ವಾಟ್ಸನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಎಲ್ ರಾಹುಲ್ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಕಳವಳಗೊಂಡಿದ್ದು ಇದರಿಂದಾಗಿ ಅವರಿಗೆ ಸ್ವತಂತ್ರವಾಗಿ ಆಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇನ್ನು ಶುಬ್ಮನ್ ಗಿಲ್ ಆತ್ಮವಿಶ್ವಾಸ ಹಾಗೂ ಅತ್ಯುತ್ಸಾಹದಿಂದ ಇದ್ದು ಅದರಿಂದಾಗಿ ಅವರಿಗೆ ಯಶಸ್ಸು ದೊರೆತಿದೆ. ಆದರೆ ಕೆಎಲ್ ರಾಹುಲ್ ಅವರನ್ನು ನೋಡಿದರೆ ಆತ ಆತ್ಮವಿಶ್ವಾಸದಲ್ಲಿದ್ದಂತೆ ಕಾಣಿಸಲಿಲ್ಲ ಎಂದಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾಟ್ಸನ್.
"ರಾಹುಲ್‌ಗೆ ಇದು ದುರದೃಷ್ಟ, ಯಾಕೆಂದರೆ ಆತ ತಂಡದಲ್ಲಿ ತನ್ನ ಸ್ಥಾನದ ಬಗ್ಗೆ ಸಾಕಷ್ಟು ಕಳವಳಗೊಂಡಿದ್ದರು. ಆ ಕಾರಣದಿಂದಾಗಿ ತನ್ನಲ್ಲಿರುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಸರಾಗವಾಗಿ ಬ್ಯಾಟಿಂಗ್ ನಡೆಸಲು ಆತನಿಗೆ ಸಾಧ್ಯವಾಗಲಿಲ್ಲ. ಒತ್ತಡದಲ್ಲಿ ಆತ ನೈಜ ಶೈಲಿಯಲ್ಲಿ ಆಡುವ ಸ್ವಾತಂತ್ರ್ಯವನ್ನು ಕಳೆದುಕೊಂಡರು. ರಾಹುಲ್ ಅವರ ದೊಡ್ಡ ಅಭಿಮಾನಿ ನಾನು. ಆತ ಆಡುವ ರೀತಿಯನ್ನು ನೋಡಲು ಬಹಳ ಆನಂದವಾಗುತ್ತದೆ. ಆತನಲ್ಲಿ ಸಾಕಷ್ಟು ಕೌಶಲ್ಯಗಳು ಇದ್ದು ತನ್ನ ಮೇಲಿನ ಒತ್ತಡವನ್ನು ಆತ ಕಳೆದುಕೊಳ್ಳಬೇಕು" ಎಂದಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಶೇನ್ ವಾಟ್ಸನ್.
ಮುಂದುವರಿದು ಮಾತನಾಡಿದ ಶೇನ್ ವಾಟ್ಸನ್, "ತನ್ನ ಮೇಲಿರುವ ಒತ್ತಡವನ್ನು ಆತ ತೆಗೆದುಹಾಕಬೇಕು. ಆತನಲ್ಲಿ ಸಾಕಷ್ಟು ಕೌಶಲ್ಯಗಳು ಇರುವ ಕಾರಣ ಬರುವ ಎಸೆತಗಳನ್ನು ಅದಕ್ಕೆ ತಕ್ಕನಾಗಿ ಆಡಬೇಕು. ಆತ ವಿಶ್ವದ ಎಲ್ಲಾ ಭಾಗದಲ್ಲಿಯೂ ಎಲ್ಲಾ ಪರಿಸ್ಥಿತಿಯಲ್ಲಿಯೂ ಅದ್ಭುತವಾಗಿ ಆಡುವ ಸಾಮರ್ಥ್ಯವಿರುವ ಆಟಗಾರ" ಎಂದು ಕೆಎಲ್ ರಾಹುಲ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಶೇನ್ ವಾಟ್ಸನ್.
ರೋಹಿತ್ ಶರ್ಮಾ ನಾಯಕತ್ವಕ್ಕೆ ವಾಟ್ಸನ್ ಮೆಚ್ಚುಗೆ: ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮಾ ಬಗ್ಗೆಯೂ ವಾಟ್ಸನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ನಾಯಕನಾಗಿ ನೀಡುತ್ತಿರುವ ಪ್ರದರ್ಶನಕ್ಕೆ ವಾಟ್ಸನ್ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
"ರೋಹಿತ್ ಶರ್ಮಾ ಒಬ್ಬ ಅನುಭವಿ ನಾಯಕ. ಟೆಸ್ಟ್ ನಾಯಕನಾಗಿ ಇದು ಅವರಿಗೆ ನಿಜವಾದ ದೊಡ್ಡ ಸರಣಿಯಾಗಿದೆ ನಿಜ. ಆದರೆ ಆತ ಬಹಳ ಅನುಭವಿ ನಾಯಕ ಎಂಬುದರಲ್ಲಿ ಅನುಮಾನವಿಲ್ಲ ಅಲ್ಲದೆ ಅವರು ರಾಹುಲ್ ದ್ರಾವಿಡ ಅವರಂತಾ ಶ್ರೇಷ್ಠ ವ್ಯಕ್ತಿತ್ವದ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಆವರಿಂದ ಬೇಕಾದ ನಿರ್ದೇಶಗಳು ಹಾಗೂ ಸಲಹೆಗಳು ಕೂಡ ಅವರಿಗೆ ದೊರೆಯುತ್ತದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕನಾಗಿ ಪಡೆದುಕೊಂಡ ಯಶಸ್ಸು ಹಾಗೂ ಅನುಭವದಿಂದಾಗಿಯೇ ಅವರು ತಂಡದ ಭಾರತ ತಂಡದ ನಾಯಕತ್ವವನ್ನು ಪಡೆದುಕೊಂಡಿದ್ದಾರೆ" ಎಂದು ರೋಹಿತ್ ಶರ್ಮಾ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವಾಟ್ಸನ್.