
ಜೋ ರೂಟ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ವಾಟ್ಸನ್
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಇಂಗ್ಲೆಂಡ್ ಅನುಭವಿ ಆಟಗಾರ ಜೋ ರೂಟ್ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. Fab 4 ಪೈಕಿ ಅತಿ ಹೆಚ್ಚು ರನ್ ಗಳಿಸುವ ಆಟಗಾರ ಜೋ ರೂಟ್ ಆಗಲಿದ್ದಾರೆ ಎಂದು ಶೇನ್ ವಾಟ್ಸನ್ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ಫ್ಯಾಬ್ 4 ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಹಾಗೂ ಜೋ ರೂಟ್ ಪೈಕಿ ಇಂಗ್ಲೆಂಡ್ ಮಾಜಿ ನಾಯಕನೇ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚಿನ ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ ಶೇನ್ ವಾಟ್ಸನ್.

ಸಚಿನ್ ದಾಖಲೆ ಸನಿಹಕ್ಕೆ ತಲುಪಲಿದ್ದಾರೆ ರೂಟ್
ಇನ್ನು ಜೋ ರೂಟ್ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿರುವ ಶೇನ್ ವಾಟ್ಸನ್ ರೂಟ್ ಫ್ಯಾಬ್-4 ಪೈಕಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳುವುದರ ಜೊತೆಗೆ ಮತ್ತಷ್ಟು ಮೈಲಿಗಲ್ಲುಗಳನ್ನು ಸಾಧಿಸಲಿದ್ದಾರೆ ಎಂದಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚಿನ ರನ್‌ಗಳಿಸಿದ ವಿಶ್ವ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಸನಿಹಕ್ಕೆ ತಲುಪಲಿದ್ದಾರೆ ಎಂದಿದ್ದಾರೆ.

Fab-4 ಆಟಗಾರರು ಗಳಿಸಿರುವ ರನ್‌ಗಳೆಷ್ಟು!
ಫ್ಯಾಬ್-4 ಎಂದು ಖ್ಯಾತಿಗಳಿಸಿರುವ ವಿರಾಟ್ ಕೊಹ್ಲಿ, ಜೋ ರೂಟ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಪೈಕಿ ಹೆಚ್ಚಿನ ರನ್‌ಗಳಿಸಿದ ಸಾಧನೆಯನ್ನು ಪ್ರಸ್ತುತ ಜೋ ರೂಟ್ ಹೊಂದಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ರೂಟ್ 118 ಟೆಸ್ಟ್ ಪಂದ್ಯಗಳನ್ನಾಡಿದ್ದು 10,015 ರನ್‌ಗಳನ್ನು ಗಳಿಸಿದ್ದಾರೆ. ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ 85 ಪಂದ್ಯಗಳಲ್ಲಿ 8010 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 101 ಟೆಸ್ಟ್‌ಗಳಿಂದ 8043 ರನ್ ಗಳಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್ 87 ಟೆಸ್ಟ್‌ಗಳಲ್ಲಿ 7289 ರನ್ ಗಳಿಸಿದ್ದಾರೆ.

ಅದ್ಭುತ ಫಾರ್ಮ್ ಮುಂದುವರಿಸಿರುವ ರೂಟ್
ಜೋ ರೂಟ್ ತಮ್ಮ ಅದ್ಭುತ ಫಾರ್ಮ್‌ಅನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಮುಂದುವರಿಸಿದ್ದಾರೆ. ಕಿವೀಸ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿಯೂ ಜೋ ರೂಟ್ ಶತಕ ಗಳಿಸಿದ್ದು ಎರಡು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸರಣಿಯ ಅಂತಿಮ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು ಪ್ರವಾಸಿ ನ್ಯೂಜಿಲೆಂಡ್ ತಮಡ ಮೊದಲಿಗೆ ಬ್ಯಾಟಿಂಗ್ ಆರಂಭಿಸಿದೆ.


Click it and Unblock the Notifications












