
ಕಾರ್ಡಿಫ್, ಜುಲೈ 6: ಗಾಯಗೊಂಡಿರುವ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ಬದಲು ಶಾರ್ದೂಲ್ ಠಾಕೂರ್ ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಎಡಗೈ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದ ಜಸ್‌ಪ್ರೀತ್ ಬೂಮ್ರಾ ಅವರು ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ. ಅವರ ಬದಲು ಹೊಸ ಮುಖ ದೀಪಕ್ ಚಾಹರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಲೀಡ್ಸ್‌ನಲ್ಲಿ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬೂಮ್ರಾ ಭಾರತಕ್ಕೆ ಮರಳಿದ್ದಾರೆ. ಚಿಕಿತ್ಸೆ ಯಶಸ್ವಿಯಾಗಿದ್ದು, ಬೂಮ್ರಾ ಚೇತರಿಸಿಕೊಳ್ಳಲು ಕೆಲವು ಸಮಯ ಬೇಕಾಗಲಿದೆ. ಅವರು ಬೇಗನೆ ಚೇತರಿಸಿಕೊಂಡರೆ ಟೆಸ್ಟ್ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸದ ತ್ರಿಕೋನ ಸರಣಿಯಲ್ಲಿ ಆಡಿರುವ ಮುಂಬೈ ವೇಗಿ ಶಾರ್ದೂಲ್ ಠಾಕೂರ್, ಅಲ್ಲಿಯೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ಎ ತಂಡವನ್ನು ಒಳಗೊಂಡಿದ್ದ ತ್ರಿಕೋನ ಸರಣಿಯ ನಾಲ್ಕು ಏಕದಿನ ಪಂದ್ಯಗಳಲ್ಲಿ ಶಾರ್ದೂಲ್ ಎಂಟು ವಿಕೆಟ್‌ಗಳನ್ನು ಕಿತ್ತಿದ್ದರು.
ಭಾರತ ಏಕದಿನ ತಂಡಕ್ಕೆ ಇತ್ತೀಚೆಗೆ ಹಲವು ಸರಣಿಗಳಿಗೆ ಶಾರ್ದೂಲ್ ಆಯ್ಕೆಯಾಗಿದ್ದರು. ಕಳೆದ ವರ್ಷ ಶ್ರೀಲಂಕಾ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ 52 ರನ್ ನೀಡಿ 4 ವಿಕೆಟ್ ಪಡೆದಿರುವುದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಾಧನೆಯಾಗಿದೆ.