ಆಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಆತಿಥೇಯ ಆಸ್ಟ್ರೇಲಿಯಾ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಈ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಸಂಘಟಿತ ಆಟವನ್ನು ಪ್ರದರ್ಶಿಸಿ ಗೆಲುವು ದಾಖಲಿಸಿದೆ. ಮಹತ್ವದ ಪಂದ್ಯದಲ್ಲಿ ಮನಮೋಹಕ ಆಟದ ಪ್ರದರ್ಶನ ನೀಡಿದ ಆಸೀಸ್ ಭರವಸೆಯ ಆಟಗಾರ ಟ್ರಾವಿಸ್ ಹೆಡ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಗೆಲುವಿನಲ್ಲಿ ಮಿಂಚಿದ್ದಾರೆ. ಈ ಸೋಲು ಟೀಮ್ ಇಂಡಿಯಾದ ಆತ್ಮ ವಿಶ್ವಾಸವನ್ನು ಕೊಂಚ ಕುಗ್ಗಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಈ ಟೆಸ್ಟ್ ಪಂದ್ಯ ಮಹತ್ವದಾಗಿದೆ. ಈ ಸರಣಿಯಲ್ಲಿ ಗೆಲುವು ಸಾಧಿಸಿದರೆ ಮಾತ್ರ ಭಾರತ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಮೂರನೇ ಟೆಸ್ಟ್‌ಗೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಎರಡನೇ ಟೆಸ್ಟ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಆಟಗಾರರನ್ನು, ಮೂರನೇ ಟೆಸ್ಟ್‌ನಿಂದ ಕೈ ಬಿಡುವ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ಭರವಸೆ ಮೂಡಿಸಿದ್ದ ಭರವಸೆಯ ಯುವ ಆಟಗಾರ ಹರ್ಷಿತ್ ರಾಣಾ ಅವರು, ಆಡಿಲೇಡ್‌ನಲ್ಲಿ ನಡೆದ ಡೇ ಆಂಡ್ ನೈಟ್ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಮೊದಲು ಇನಿಂಗ್ಸ್‌ನಲ್ಲಿ 16 ಓವರ್ ಬೌಲ್ ಮಾಡಿ 5.37ರ ಸರಾಸರಿಯಲ್ಲಿ ರನ್‌ಗಳನ್ನು ನೀಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಇವರಿಗೆ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ. ಕಾರಣ ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಆಸೀಸ್‌ಗೆ ನೀಡಿದ್ದ ಗೆಲುವಿನ ಮೊತ್ತ ಚಿಕ್ಕದಾಗಿತ್ತು.
ಎರಡನೇ ಟೆಸ್ಟ್ ಡೇ ಆಂಡ್ ನೈಟ್ ನಡೆದಿದ್ದು, ಈ ವೇಳೆ ಅನುಭವಿ ಆಟಗಾರರ ಬೇಕಾಗುತ್ತಾರೆ ಎಂದು ರೋಹಿತ್ ಶರ್ಮಾ ಸ್ಪಿನ್ ಮಾಂತ್ರಿಕ ಅಶ್ವಿನ್ ಅವರಿಗೆ ಸ್ಥಾನ ನೀಡಿದರು. ಇವರು ಆಲ್‌ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದರು. ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ 22 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 7 ರನ್ ಸಿಡಿಸಿದರು. ಇದೇ ವೇಳೆ ಬೌಲಿಂಗ್ ಮಾಡುವಾಗ ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ 18 ಓವರ್ ಬೌಲ್ ಮಾಡಿ 53 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು. ಇದು ನಿಜಕ್ಕೂ ಟೀಮ್ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿತು.

ಭಾರತ ಪರ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹರ್ಷಿತ್ ರಾಣಾ ಬದಲಿಗೆ ಆಕಾಶದೀಪ್‌ಗೆ ಅವಕಾಶ ಸಿಗಬಹುದು ಎಂದು ನಂಬಲಾಗಿದೆ. ಆಕಾಶ್ ಇದುವರೆಗೆ ಆಡಿರುವ 5 ಟೆಸ್ಟ್ ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಾಧಿಸಲು ಬೇಕಾದ ಬದಲಾವಣೆಗಳನ್ನು ಟೀಮ್ ಇಂಡಿಯಾ ಮಾಡಿಕೊಳ್ಳಲಿದೆ. ಉಭಯ ದೇಶಗಳ ನಡುವಣ ಮೂರನೇ ಟೆಸ್ಟ್ ಡಿಸೆಂಬರ್ 14ರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.