ಭಾರತ-ಪಾಕಿಸ್ತಾನ ಸರಣಿಗೆ ಬಗ್ಗೆ ಹೊಸ ಅಧ್ಯಕ್ಷರು ಹೇಳಿದ್ದೇನು?
ಮುಂಬೈ, ಅ.04: ನಾಗಪುರ ಮೂಲದ ವಕೀಲ ಶಶಾಂಕ್ ಮನೋಹರ್ ಅವರು ಎರಡನೇ ಬಾರಿಗೆ ಭಾರತೀಯ ಕ್ರಿಕೆಟ್ ಚುಕ್ಕಾಣಿ ಹಿಡಿದಿದ್ದಾರೆ. ಭಾನುವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಮಹಾಸಭೆಯಲ್ಲಿ ಶಶಾಂಕ್ ಮನೋಹರ್ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಬಿಸಿಸಿಐ ಅಧ್ಯಕ್ಷರಾಗಿದ್ದ ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನವನ್ನು 58 ವರ್ಷದ ಶಶಾಂಕ್ ಮನೋಹರ್ ಅವರು ತುಂಬುತ್ತಿದ್ದಾರೆ. ತಮ್ಮ ಚೊಚ್ಚಲ ಭಾಷಣದಲ್ಲಿ ಆಡಳಿತದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ, ಭಾರತ ಹಾಗೂ ಪಾಕಿಸ್ತಾನ ಸರಣಿ ಬಗ್ಗೆ ಮಾತನಾಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಸರಣಿ ಬಗ್ಗೆ ಬಿಸಿಸಿಐಯಾಗಲಿ, ಪಿಸಿಬಿಯಾಗಲಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ದೇಶಗಳ ಸರ್ಕಾರದ ನಿರ್ಧಾರದ ಮೇಲೆ ಸರಣಿ ನಡೆಸುವುದೋ ಬೇಡವೋ ಎಂಬುದು ನಿರ್ಧಾರವಾಗಲಿದೆ ಎಂದಿದ್ದಾರೆ.

ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಗೆ ಸೇರಿರುವ ಶಶಾಂಕ್ ಅವರ ಆಯ್ಕೆಗೆ ಪೂರ್ವ ವಲಯ ಎಲ್ಲಾ ಆರು ಸದಸ್ಯರಿಂದ ಸಮ್ಮತಿ ಸಿಕ್ಕಿತ್ತು. 2017ರ ತನಕ ಶಶಾಂಕ್ ಮನೋಹರ್ ಅವರ ಅಧಿಕಾರ ಅವಧಿ ಇರಲಿದೆ.
ನಾಮಪತ್ರ ಸಲ್ಲಿಸಲು ಶನಿವಾರ ಕೊನೇ ದಿನವಾಗಿತ್ತು ಮತ್ತು ಮನೋಹರ್ ಅಧ್ಯಕ್ಷ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿದ್ದರು. ಹೀಗಾಗಿ ಅವಿರೋಧ ಆಯ್ಕೆ ಖಚಿತ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದರು.
ಈ ಹಿಂದೆ 2008ರಿಂದ 2011ರ ವರೆಗೆ ಮೊದಲ ಬಾರಿಗೆ ಶಶಾಂಕ್ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದರು. ಬಿಸಿಸಿಐ ಮತ್ತು ಐಸಿಸಿ ಮಾಜಿ ಅಧ್ಯಕ್ಷ ಶರದ್ ಪವಾರ್ ಬಣದೊಂದಿಗೆ ಗುರುತಿಸಿಕೊಳ್ಳುವ ಶಶಾಂಕ್ ಅವರು ಶುದ್ಧಹಸ್ತರಾಗಿ ಜನಪ್ರಿಯತೆ ಗಳಿಸಿದ್ದಾರೆ.
ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಐಸಿಸಿ ಚೇರ್ಮನ್ ಎನ್. ಶ್ರೀನಿವಾಸನ್ ಅವರು ನಿರೀಕ್ಷೆಯಂತೆ ಸಭೆಯಿಂದ ದೂರ ಉಳಿದಿದ್ದರು.
ಬಿಸಿಸಿಐ ಬ್ರಾಂಡ್ ಉಳಿಸಬೇಕಿದೆ: ಜಗ್ಮೋಹನ್ ದಾಲ್ಮಿಯಾ ಅವರು ಕ್ರಿಕೆಟ್ ಆಡಳಿತದಲ್ಲಿ ತಂದ ಬದಲಾವಣೆಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು, ಬಿಸಿಸಿಐ ಬ್ರಾಂಡ್ ಉಳಿಸಲು ಎಲ್ಲರೂ ಶ್ರಮಿಸಬೇಕಿದೆ.
ಆಟಗಾರರು ಹಾಗೂ ಆಡಳಿತಗಾರರಿಗೆ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ತರಬೇತಿ ಸಿಗಲಿದೆ. ಒಂಬುಡ್ಸನ್ ನೇಮಿಸಿ ಆಡಳಿತ ಯಂತ್ರವನ್ನು ಸರಳ ಹಾಗೂ ಪಾರದರ್ಶಕ ಮಾಡಲಾಗುವುದು ಎಂದು ನೂತನ ಅಧ್ಯಕ್ಷ ಶಶಾಂಕ್ ಮನೋಹರ್ ತಮ್ಮ ಚೊಚ್ಚಲ ಭಾಷಣದಲ್ಲಿ ಹೇಳಿದರು.(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications