ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್‌ವೊಂದು ಸಂಚಲನ ಸೃಷ್ಟಿ ಮಾಡಿದೆ. ಜನವರಿ 12ರ ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಶಿಖರ್ ಧವನ್ ಅವರು ತಮ್ಮ ಗೆಳತಿ ಸೋಫಿ ಶೈನ್ ಅವರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಕ್ರಿಕೆಟಿಗ ಶಿಖರ್ ಧವನ್ ಅವರು ಕಳೆದ ವರ್ಷ ಮೇ 1 ರಂದು ಸೋಫಿ ಶೈನ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಹೇಳಿದ್ದರು. ಡೇಟಿಂಗ್‌ನ ನಂತರ ಶಿಖರ್ ಧವನ್ ಹಾಗೂ ಸೋಫಿ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಕ್ರಿಕೆಟಿಗ ಶಿಖರ್ ಧವನ್ ಅವರು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಶಿಖರ್ ಧವನ್ ಹಾಗೂ ಸೋಫಿ ಅವರ ಕೈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು. ನಗುಗಳಿಂದ ಹಂಚಿಕೊಂಡ ಕನಸುಗಳವರೆಗೆ. ನಾವು ಶಾಶ್ವತವಾಗಿ ಒಂದಾಗಲು ನಿರ್ಧರಿಸಿದ್ದೇವೆ. ನಮ್ಮ ನಿಶ್ಚಿತಾರ್ಥಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾದ. ಪ್ರೀತಿ, ಆಶೀರ್ವಾದ ಮತ್ತು ಪ್ರತಿಯೊಂದು ಶುಭ ಹಾರೈಕೆಗೆ ಕೃತಜ್ಞರಾಗಿರುತ್ತೇವೆ. ❤️💍 - ಶಿಖರ್ ಮತ್ತು ಸೋಫಿ ಎಂದು ಶಿಖರ್ ಧವನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಿಖರ್ ಮತ್ತು ಸೋಫಿ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಸೋಫಿ ಅವರು ಈ ಫೋಟೋಗೆ ಮೈ ಲವ್ ಎಂದು ಕಾಮೆಂಟ್ ಮಾಡುವುದರೊಂದಿಗೆ ಹೃದಯದ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ಮೂಲಕ ಶಿಖರ್ ಧವನ್ ಅವರ ವೈಯಕ್ತಿಕ ಜೀವನದ ಬಗ್ಗೆ ತಿಂಗಳುಗಳಿಂದ ಕೇಳಿ ಬರುತ್ತಿದ್ದಂತಹ ಊಹಾಪೋಹಗಳಿಗೆ ಬ್ರೇಕ್ ಬಿದ್ದಂತೆ ಆಗಿದೆ. ಈಚೆಗೆ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಸಮಯದಲ್ಲಿ ಧವನ್ ಮತ್ತು ಸೋಫಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಶಿಖರ್ ಧವನ್ ಹಾಗೂ ಸೋಫಿ ಅವರ ಎಂಗೇಜ್‌ಮೆಂಟ್ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸೋಫಿ ಶೈನ್ ಯಾರು ಎನ್ನುವುದು ಟ್ರೆಂಡ್ ಆಗುತ್ತಿದೆ. ಸೋಫಿ ಐರಿಶ್ ಉತ್ಪನ್ನ ಸಲಹೆಗಾರರಾಗಿದ್ದಾರೆ. ಅಲ್ಲದೇ ಇವರು ಯುಎಸ್ ಮೂಲದ ಹಣಕಾಸು ಸೇವಾ ಸಂಸ್ಥೆಯಾದ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಉಪಾಧ್ಯಕ್ಷೆ - ಉತ್ಪನ್ನ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಶಿಖರ್ ಧವನ್ ಅವರು ಸೋಫಿ ಅವರನ್ನು ಯುಎಇಯಲ್ಲಿ ಭೇಟಿಯಾದರು ಎಂದು ಹೇಳಲಾಗಿದೆ.
ಇನ್ನು ಶಿಖರ್ ಧವನ್ ಹಾಗೂ ಸೋಫಿ ಅವರು ಮುಂದಿನ ತಿಂಗಳ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ ಶಿಖರ್ ಧವನ್ ಅವರು ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ವಿಚ್ಛೇದನದ ನಂತರ ಅವರು ಎದುರಿಸಿದ್ದ ಸಮಸ್ಯೆಗಳು ಹಾಗೂ ಭಾವನಾತ್ಮಕ ವಿಷಯಗಳನ್ನು ಶಿಖರ್ ಧವನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಮಗ ಜೋರಾವರ್ ಅವರನ್ನು ಬಹಳಷ್ಟು ದಿನಗಳಿಂದ ನೋಡಿಲ್ಲ. ತುಂಬಾ ಬೇಸರದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು.
ಧವನ್ ಮತ್ತು ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರು 2023ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. 11 ವರ್ಷಗಳ ದಾಂಪತ್ಯ ಜೀವನ ಕೊನೆಗೊಂಡಿತ್ತು. ಭಾರತದ ಮಾಜಿ ಆರಂಭಿಕ ಆಟಗಾರ್ತಿ ಆಯೇಷಾ ಅವರನ್ನು 2011 ರಲ್ಲಿ ವಿವಾಹವಾಗಿದ್ದರು.