ಟೀಮ್ ಇಂಡಿಯಾದ ಭರವಸೆಯ ಆಟಗಾರ ಶಿವಂ ದುಬೆ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಸುದ್ದಿಯೊಂದು ಹೊರ ಬಿದ್ದಿದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಶಿವಂ ದುಬೆ ಐಸಿಸಿ ಶ್ರೇಯಾಂಕದಲ್ಲಿ ಗಣನೀಯವಾಗಿ ಬಡ್ತಿ ಪಡೆದಿದ್ದಾರೆ.
ಶಿವಂ ಅವರು 2019 ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರೂ. ಬಾಂಗ್ಲಾದೇಶ ವಿರುದ್ಧದ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದರು. ಅಂದು ನಿರೀಕ್ಷೆಯಂತೆ ಪ್ರದರ್ಶನ ನೀಡಲು ಶಿವಂಗೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಅಫ್ಘಾನಿಸ್ತಾನ ವಿರುದ್ಧ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಶಿವಂ ದುಬೆ ಐಸಿಸಿ ಟಿ20 ಶ್ರೇಯಾಂಕದಲ್ಲಿ 207 ಸ್ಥಾನ ಜಿಗಿದು 58ನೇ ಸ್ಥಾನಕ್ಕೆ ತಲುಪಿದ್ದಾರೆ.

ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಶ್ರೇಯಾಂಕದಲ್ಲಿ ಶಿವಂ ದುಬೆ ಒಂದಲ್ಲ ಎರಡಲ್ಲ, ಬರೋಬ್ಬರಿ 207 ಸ್ಥಾನಗಳ ಜಿಗಿತವನ್ನು ಕಂಡಿದ್ದಾರೆ. ಇದೀಗ ಶಿವಂ ರೇಟಿಂಗ್ 472ಕ್ಕೆ ಏರಿಕೆಯಾಗಿದ್ದು, 58ನೇ ಸ್ಥಾನಕ್ಕೆ ತಲುಪಿದ್ದಾರೆ. ಇದು ಅವರ ಟಿ20 ವೃತ್ತಿಜೀವನದಲ್ಲಿ ಇದುವರೆಗಿನ ಅತ್ಯುತ್ತಮ ಶ್ರೇಯಾಂಕ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಎರಡು T20 ಪಂದ್ಯಗಳಲ್ಲಿ ಶಿವಂ ಸತತ ಎರಡು ಅರ್ಧಶತಕಗಳನ್ನು ಗಳಿಸಿದರು. ಇನ್ನು ಮೂರನೇ ಟಿ20 ಪಂದ್ಯ ಬಾಕಿ ಉಳಿದಿದ್ದು ನಿಶ್ಚಿತವಾಗಿ ಇವರು ಟಾಪ್ 50ರಲ್ಲಿ ಸ್ಥಾನ ಪಡೆಯಬಹುದು.
ಮೊಹಾಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಿವಂ ದುಬೆ 40 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿದರು. ಇಂದೋರ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು ಮತ್ತು 32 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದರು. ವಿಶೇಷವೆಂದರೆ ಶಿವಂ ದುಬೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಎರಡೂ ಬಾರಿ ಒಮ್ಮೆಯೂ ಔಟಾಗಿಲ್ಲ. ಉತ್ತಮ ಲೈನ್ ಹಾಗೂ ಲೆಂಥ್‌ನಲ್ಲಿ ದಾಳಿ ನಡೆಸಿ ಗಮನ ಸೆಳೆದರು.

ಶಿವಂ ದುಬೆ 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 275 ರನ್ ಗಳಿಸಿದ್ದಾರೆ. ಅವರ ಸರಾಸರಿ 45.83 ಆಗಿದೆ. ಅಲ್ಲದೆ, ಅವರ ಸ್ಟ್ರೈಕ್ ರೇಟ್ 149.45 ಆಗಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು, ಅದರ ಸಂಪೂರ್ಣ ಲಾಭ ಪಡೆಯುವಲ್ಲಿ ಸಫಲರಾಗಿದ್ದಾರೆ. ಐಪಿಎಲ್‌ನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಪರ ಆಡಿದ ನಂತರ, ಶಿವಂ ಅವರ ಅದೃಷ್ಟ ಇದ್ದಕ್ಕಿದ್ದಂತೆ ತಿರುವು ಪಡೆದುಕೊಂಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಟಿ20 ಸರಣಿಯಲ್ಲೂ ಶಿವಂ ದುಬೆಗೆ ಭಾರತ ತಂಡದಲ್ಲಿ ಸ್ಥಾನ ಲಭಿಸಿತು. ಆದರೆ ಅವರಿಗೆ ಆ ಸರಣಿಯ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಿದಾಗ ಅವರನ್ನು ತಂಡದಿಂದ ಕೈ ಬಿಡಲಾಯಿತು. ಆದರೆ ಈಗ ಅಫ್ಘಾನಿಸ್ತಾನದ ವಿರುದ್ಧ ಅವರು ತಂಡದಲ್ಲಿ ಮಾತ್ರವಲ್ಲದೆ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಿದ್ದಾರೆ. ಇದುವರೆಗೆ 51 ಐಪಿಎಲ್ ಪಂದ್ಯಗಳನ್ನು ಆಡಿರುವ ಶಿವಂ 1106 ರನ್ ಗಳಿಸಿದ್ದಾರೆ.