ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕೆಎಲ್ ರಾಹುಲ್ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದರು. ಈ ಶತಕ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಆಟಗಾರನಿಂದ ಬಂದ ಅತ್ಯಂತ ವೇಗದ ಶತಕ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಅದ್ಭುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಅಂತಿಮ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭರ್ಜರಿ 410 ರನ್‌ಗಳನ್ನು ಕಲೆಹಾಕಿದೆ. ಶ್ರೇಯಸ್ ಐಯ್ಯರ್ ಕೂಡ ಈ ಪಂದ್ಯದಲ್ಲಿ ಭಾರತದ ಪರವಾಗಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಕೆಎಲ್ ರಾಹುಲ್ ನೀಡಿದ ಅಮೋಘ ಪ್ರದರ್ಶನದ ಬಗ್ಗೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ಕೆಎಲ್ ರಾಹುಲ್ ವಿಶ್ವದ ಅತ್ಯುತ್ತಮ ಐದನೇ ಕ್ರಮಾಂಕದ ಬ್ಯಾಟರ್ ಎಂದು ಹೊಗಳಿದ್ದಾರೆ ಶೋಯೆಬ್ ಮಲಿಕ್.

ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಕೇವಲ 62 ಎಸೆಗಗಳಲ್ಲಿ ಶತಕದ ಗಡಿ ದಾಟಿದ್ದರು. ಈ ಮೂಲಕ ಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶರ್ಮಾ ಸಿಡಿಸಿದ್ದ 63 ಎಸೆತಗಳ ಶತಕವನ್ನು ಹಿಂದಿಕ್ಕಿ ದಾಖಲೆ ಬರೆದಿದ್ದಾರೆ.
ಈ ಪ್ರದರ್ಶನದ ಬಳಿಕ ಕೆಎಲ್ ರಾಹುಲ್ ಅವರನ್ನು ಶೋಯೆಬ್ ಮಲಿಕ್ ಮುಕ್ತಕಂಠದಿಂದ ಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರೊಂದಿಗೆ ರಾಹುಲ್ ಅವರನ್ನು ಹೋಲಿಕೆ ಮಾಡಿದರು. ಈ ಇಬ್ಬರ ಪೈಕಿ ರಾಹುಲ್ ಅವರಲ್ಲಿ ಯಾವುದೇ ಹಂತದಿಂದಲೂ ತಂಡವನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿರು ಆಟಗಾರ ಎಂದು ಬಣ್ಣಿಸಿದ್ದಾರೆ.
"ಆತ ಐದನೇ ಕ್ರಮಾಂಕದಲ್ಲಿ ಅತ್ಯುತ್ತಮ ಆಟಗಾರ. ಕ್ಲಾಸೆನ್ ಅವರಿಗೆ ಮುಂದುವರಿಯಬೇಕಾದರೆ ಅಗ್ರ ಕ್ರಮಾಂಖದಿಂದ ಉತ್ತಮವಾದ ಅಡಿಪಾಯ ಬೇಕಾಗುತ್ತದೆ. ಬಳಿಕ ಅವರು ಆ ಆಟವನ್ನು ಮುನ್ನಡೆಸುತ್ತಾರೆ. ಆದರ ಹೋಲಿಕೆ ಮಾಡಿದರೆ ಭಾರತ ತಂಡಕ್ಕೆ ವಿಶ್ವದ ಅತ್ಯುತ್ತಮ ಐದನೇ ಕ್ರಮಾಂಕದ ಆಟಗಾರ ದೊರೆತಿದ್ದಾರೆ. ಆತ ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ಆಡುವ ಸಾಮರ್ಥ್ಯವಿರುವ ಬ್ಯಾಟರ್"
"ಭಾರತ ಎರಡು ಅಥವಾ ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೆ, ಅವರು ಪರಿಸ್ಥಿತಿಗೆ ಅನುಗುಣವಾಗಿ ಆಡಬಲ್ಲವರು. ಅವರು ಪಂದ್ಯವನ್ನು ಮುಗಿಸಬಹುದು, ಫಿನಿರ್ ಮಾಡಬಲ್ಲರು, ಸುಧಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಉತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ಆಡಬಹುದು ನಾವು ಅದನ್ನು ನೋಡಿದ್ದೇವೆ. ಅವರು ಸ್ಪಿನ್ನರ್‌ಗಳು ಮತ್ತು ವೇಗಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಾರೆ" ಎಂದು ಕೆಎಲ್ ರಾಹುಲ್ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಶೋಯೆಬ್ ಮಲಿಕ್.