ಮುಂಬೈ, ಆಗಸ್ಟ್ 17: ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ಚಿತ್ರ 'ಶೋಲೆ' ಗೆ ಈಗ 40ರ ಹಬ್ಬ. ಈ ಸಂದರ್ಭದಲ್ಲಿ ಪೂರಕವಾಗಿ ಕ್ರಿಕೆಟ್ ಪಂದ್ಯಾವಳಿವೊಂದರಲ್ಲಿ ಗಬ್ಬರ್ ಸಿಂಗ್ ಪಾತ್ರಧಾರಿ ಅಮ್ಜದ್ ಖಾನ್ ಅವರ ಪುತ್ರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಶೋಲೆ ಸಂಭ್ರಮಾಚರಣೆ ಮಾಡಿದ್ದಾರೆ.
ದಿವಂಗತ ಅಮ್ಜದ್ ಖಾನ್ ಅವರ ಪುತ್ರ ಸೀಮಬ್ ಖಾನ್ ಅವರು ಡಾ.ಎಚ್ ಡಿ ಕಂಗಾ ಲೀಗ್ ಪಂದ್ಯವೊಂದರಲ್ಲಿ ಭಾನುವಾರ ತಮ್ಮ ಲೆಗ್ ಸ್ಪಿನ್ ಜಾದೂ ಮೂಲಕ ಎದುರಾಳಿಗಳನ್ನು ಕಂಗೆಡಿಸಿ 5 ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. 1975ರ ಆಗಸ್ಟ್ 15 ರಂದು ತೆರೆ ಕಂಡ 'ಶೋಲೆ' ಚಿತ್ರದ 40ನೇ ವಾರ್ಷಿಕ ಸಂಭ್ರಮವನ್ನು ಈ ಗೆಲುವಿನೊಂದಿಗೆ ಆಚರಿಸಿದ್ದಾರೆ.

ಮುಂಬೈನಲ್ಲಿ ನಡೆದ ಪಂದ್ಯಾವಳಿಯಲ್ಲಿ ದಾದರ್ ಯೂನಿಯನ್ ಸ್ಫೋರ್ಟಿಂಗ್ ಕ್ಲಬ್ ಪರ ಆಡಿದ ಅಮ್ಜದ್ ಖಾನ್ ಅವರ 33 ವರ್ಷದ ಮಗ ಸೀಮಬ್ ಅವರು 5/25 ಗಳಿಸಿದರು. ಇದರಿಂದಾಗಿ ಶಿವಾಜಿ ಪಾರ್ಕ್ ಯಂಗ್ ಸ್ಟರ್ಸ್ (ಎಸ್ ಪಿವೈ) ತಂಡದ ವಿರುದ್ಧ ಬಿ ಡಿವಿಷನ್ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಲಾಯಿತು ಎಂದು ಮುಂಬೈನ ಮಿಡ್ ಡೇ ಸೋಮವಾರ ವರದಿ ಮಾಡಿದೆ.
ಮುಂಬೈ ತಂಡಕ್ಕೆ ಆಡುವ ಬಯಕೆ: ನಾನು ಕಳೆದ ಏಳು ವಾರದಲ್ಲಿ 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಮುಂಬೈ ತಂಡಕ್ಕೆ ಆಡುವ ಬಯಕೆ ಇದೆ ಎಂದಿದ್ದಾರೆ. ಶೋಲೆ ಚಿತ್ರದ 40ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಗೆಲುವು ಸಿಕ್ಕಿರುವುದು ಖುಷಿಕೊಟ್ಟಿದೆ ನನಗೆ ಖುಷಿಯಾಗಿದೆ ಎಂದು ಸೀಮಬ್ ಹೇಳಿದ್ದಾರೆ.