ಶ್ರೇಯಸ್ ಹ್ಯಾಟ್ರಿಕ್: ಸಿಎಸ್‌ಕೆ ಫ್ಯಾನ್ಸ್ ಖುಷ್: ಬರೋಡ ಕ್ಯಾಪ್ಟನ್ ದಾಳಿ ಕಂಡು ಆರ್‌ಸಿಬಿ ಮಂದಹಾಸ
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಆದರೂ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. 4 ವಿಕೆಟ್‌ಗಳಿಂದ ಬರೋಡಾ ಗೆದ್ದು ಬೀಗಿದೆ. ಈ ಮೂಲಕ ಕರ್ನಾಟಕದ ಮುಂದಿನ ಹಂತದ ಆಸೆ ಕಮರಿದಂತೆ ಆಗುತ್ತಿದೆ. ಮಯಾಂಕ್ ಅಗರ್‌ವಾಲ್ ಪಡೆ ತನ್ನ ಕೊನೆಯ ಪಂದ್ಯವನ್ನು ಗುಜರಾತ್ ವಿರುದ್ಧ ಡಿಸೆಂಬರ್ 5 ರಂದು ಆಡಲಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ ಮಯಾಂಕ್ ಪಡೆ 8 ವಿಕೆಟ್‌ಗೆ 169 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬರೋಡಾ 18.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್ ಸೇರಿಸಿ ಜಯ ಸಾಧಿಸಿತು. ಬರೋಡಾ ಟೂರ್ನಿಯಲ್ಲಿ ಐದನೇ ಗೆಲುವಿನ ನಗೆ ಬೀರಿತು.

ಕಳಪೆ ಆರಂಭ
ಕರ್ನಾಟಕದ ಪರ ಇನಿಂಗ್ಸ್ ಆರಂಭಿಸಿದ ಅನುಭವಿ ಬ್ಯಾಟರ್‌ಗಳಾದ ಮನೀಷ್ ಪಾಂಡೆ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 4 ರನ್ ಸೇರಿಸಿ ಔಟ್ ಆಯಿತು. ಮಯಾಂಕ್ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಮನೀಷ್ ಪಾಂಡೆ 10 ರನ್‌ಗಳಿಗೆ ಆಟ ಮುಗಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ಶ್ರೀಜೇತ್ 22 ರನ್ ಸಿಡಿಸಿದರು.
4ನೇ ವಿಕೆಟ್‌ಗೆ ಶ್ರೇಯಸ್ ಗೋಪಾಲ್ ಹಾಗೂ ಸ್ಮರಣ್ ಆರ್ ಜೋಡಿ 42 ಎಸೆತಗಳಲ್ಲಿ 48 ರನ್ ಸಿಡಿಸಿತು. ಶ್ರೇಯಸ್ 18, ಸ್ಮರಣ್ 38 ರನ್ ಸಿಡಿಸಿದರು. ಆರ್‌ಸಿಬಿ ತಂಡ ಸೇರಿರುವ ಕೃನಾಲ್ ಪಾಂಡ್ಯ, ಎ ಶೇಠ್ ತಲಾ ಎರಡು ವಿಕೆಟ್ ಕಬಳಿಸಿದರು.
ಅಭಿನವ್ ಬಿರುಸಿನ ಬ್ಯಾಟಿಂಗ್
ಮಧ್ಯಮ ಕ್ರಮಾಂಕದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಭಿನವ್ ಮನೋಹರ್ 34 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ ಅಜೇಯ 56 ರನ್ ಬಾರಿಸಿದರು. ಉಳಿದ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯ ಮುಗಿಸಿದರು.
ಗುರಿಯನ್ನು ಬೆನ್ನತ್ತಿದ ಬರೋಡಾ ತಂಡದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್‌ಗೆ ಭಾನು ಪುನಿಯಾ, ಶಾಶ್ವತ್ ರಾವತ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 51 ಎಸೆತಗಳಲ್ಲಿ 89 ರನ್ ಸಿಡಿಸಿದರು. ಶಾಶ್ವತ್ ರಾವತ್ 63 ರನ್ ಬಾರಿಸಿದರು.
ಶ್ರೇಯಸ್ ಹ್ಯಾಟ್ರಿಕ್
11ನೇ ಓವರ್ ಬೌಲ್ ಮಾಡಿದ ಶ್ರೇಯಸ್ ಗೋಪಾಲ್ ಅಮೋಘ ಸಾಧನೆ ಮಾಡಿದರು. ಈ ಓವರ್‌ನ ಮೊದಲ ಎಸೆತದಲ್ಲಿ ಶಾಶ್ವತ್ ರಾವತ್ ಅವರನ್ನು, ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯರನ್ನು, ಮೂರನೇ ಎಸೆತದಲ್ಲಿ ನಾಯಕ ಕೃನಾಲ್ ಪಾಂಡ್ಯರನ್ನು ಬಲಿ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು.
ಭಾನು ಪುನಿಯಾ 42 ರನ್ ಬಾರಿಸಿ ರಂಜಿಸಿದರು. ವಿಷ್ಣು ಸಾಳುಂಕಿ ಅಜೇಯ 28, ಅತಿತ್ ಶೇಠ್ ಅಜೇಯ 6 ರನ್ ಸಿಡಿಸಿದರು.
ಕರ್ನಾಟಕದ ಪರ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications