ಚಾಂಪಿಯನ್ಸ್ ಟ್ರೋಫಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಎಲ್ಲರೂ ಲಯಕ್ಕೆ ಮರಳಿದ್ದಾರೆ. ಭಾರತದ ಟಾಪ್ ಆರ್ಡರ್ ಆಟಗಾರರು ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್ ಪಡೆಯ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಿಸಿಸಿಐ ಕೇಂದ್ರ ಒಪ್ಪಂದದಿಂದ ದೂರ ಇರುವ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್, ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಅಲ್ಲದೆ ಏಕದಿನ ತಂಡದಲ್ಲಿ ಸ್ಥಾನ ಸಹ ಪಡೆದಿದ್ದಾರೆ. ತಮಗೆ ತಂಡ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಶ್ರೇಯಸ್, ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ ಕ್ರೀಸ್‌ನಲ್ಲಿ ಟೈಮ್ ಸ್ಪೆಂಡ್ ಮಾಡಿ ರನ್ ಕಲೆ ಹಾಕುವಲ್ಲಿ ಯಶಸ್ವಿ ಯಾಗಿದ್ದಾರೆ.

ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದ್ದಾರೆ. ಇವರು ಆಡಿದ ಮೂರು ಪಂದ್ಯಗಳಲ್ಲಿ 60ರ ಸರಾಸರಿಯಲ್ಲಿ 2 ಅರ್ಧಶತಕ ಸಿಡಿಸಿದ್ದಾರೆ. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಆಡಿ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಶ್ರೇಯಸ್ ಅಹಮದಾಬಾದ್‌ನಲ್ಲಿ 64 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 78 ರನ್ ಸಿಡಿಸಿದರು. ಈ ಮೂಲಕ ಶ್ರೇಯಸ್ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದಿದ್ದಾರೆ. ಇದು ಶ್ರೇಯಸ್ ಅವರ ಏಕದಿನ ಕ್ರಿಕೆಟ್ ಬದುಕಿನ 20ನೇ ಅರ್ಧಶತಕವಾಗಿದೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 25 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಲು 68 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಇವರು ನವಜೋತ್ ಸಿಂಗ್ ಸಿಧು ಅವರ ದಾಖಲೆಯ ಸಮಕ್ಕೆ ನಿಂತಿದ್ದರು. ಆದರೆ ಶ್ರೇಯಸ್ ಅಯ್ಯರ್ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಶ್ರೇಯಸ್ ಈ ವರಗೆ 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ತಾವಾಡಿದ 60 ಇನಿಂಗ್ಸ್‌ಗಳಲ್ಲಿ ಶ್ರೇಯಸ್ ಈ ಸಾಧನೆ ಮಾಡಿದ್ದಾರೆ. ಇದೇ ಸಾಧನೆಯನ್ನು ಕೆಎಲ್ ರಾಹುಲ್ ಮಾಡಲು 69 ಇನಿಂಗ್ಸ್ ಹಾಗೂ ಶಿಖರ್ ಧವನ್ ಮಾಡಲು 72 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

ಶ್ರೇಯಸ್ ಅಯ್ಯರ್ ಇದುವರೆಗೆ 65 ಏಕದಿನ ಪಂದ್ಯಗಳ 60 ಇನ್ನಿಂಗ್ಸ್‌ಗಳಲ್ಲಿ 2602 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರ ಬ್ಯಾಟ್ 5 ಶತಕಗಳು ಮತ್ತು 20 ಅರ್ಧಶತಕಗಳನ್ನು ಗಳಿಸಿದೆ. ಶ್ರೇಯಸ್ ಸರಾಸರಿ 48.18 ಮತ್ತು 102.48 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಈ ಸಾಧನೆ ಶ್ರೇಯಸ್ ಅಯ್ಯರ್ ಅವರಿಗೆ ತುಂಬಾ ವಿಶೇಷವಾಗಿದೆ, ಏಕೆಂದರೆ ಕಳೆದ ಕೆಲವು ಸಮಯದಿಂದ ಅವರು ತಮ್ಮ ಕಳಪೆ ಪ್ರದರ್ಶನಕ್ಕಾಗಿ ನಿರಂತರವಾಗಿ ವಿಮರ್ಶಕರಿಂದ ಗುರಿಯಾಗುತ್ತಿದ್ದರು. ಶ್ರೇಯಸ್ ಅವರ ನಾಲ್ಕನೇ ಸ್ಥಾನ ಈಗ ದೃಢಪಟ್ಟಿದೆ, ಅವರು ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ಸಂಖ್ಯೆಯಲ್ಲಿ ಆಡುವುದನ್ನು ಕಾಣಬಹುದು.