
ನವದೆಹಲಿ: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿರುವ ಶ್ರೇಯಸ್ ಐಯ್ಯರ್ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಟೂರ್ನಿ 'ರಾಯಲ್ ಲಂಡನ್ ಕಪ್'ನಲ್ಲಿ ಲ್ಯಾನ್ಸೆಶೈರ್ ಪರ ಆಡಲಿದ್ದಾರೆ.
'ರಾಯಲ್ ಲಂಡನ್ ಕಪ್' ಅನ್ನೋದು ಇಂಗ್ಲೆಂಡ್ ಮತ್ತು ವೇಲ್ಸ್‌ನ ಪ್ರಥಮದರ್ಜೆ ಕೌಂಟಿ ಕ್ರಿಕೆಟ್ ಟೂರ್ನಿ. 50 ಓವರ್‌ಗಳ ಪಂದ್ಯಗಳ ಟೂರ್ನಿಯಿದು. ಸಮರ್‌ಸೆಟ್ ಕೌಂಟಿ ಕ್ರಿಕೆಟ್ ಕ್ಲಬ್ ಸದ್ಯಕ್ಕೆ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡಿದೆ. ಸಮರ್‌ಸೆಟ್ ತಂಡ ಒಟ್ಟು 4 ಬಾರಿ ಪ್ರಶಸ್ತಿ ಜಯಿಸಿದೆ.
ಮುಂಬರುವ ಜುಲೈನಲ್ಲಿ 'ರಾಯಲ್ ಲಂಡನ್ ಕಪ್' ಟೂರ್ನಿ ಆರಂಭವಾಗಲಿದ್ದು, ಟೂರ್ನಿ ಸಂಬಂಧ ಅಯ್ಯರ್ ಜುಲೈ 15ಕ್ಕೆ ಲಂಡನ್‌ನ ಓಲ್ಡ್ ಟ್ರಾಫರ್ಡ್‌ಗೆ ಬಂದಿಳಿಯಲಿದ್ದಾರೆ. ಶ್ರೇಯಸ್ ಐಯ್ಯರ್ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ.
ಭಾರತ ತಂಡದ ಪರ 21 ಏಕದಿನ ಪಂದ್ಯಗಳಲ್ಲಿ 807 ರನ್, 28 ಟಿ20ಐ ಪಂದ್ಯಗಳಲ್ಲಿ 550 ರನ್ ಮತ್ತು 79 ಏಕದಿನ ಪಂದ್ಯಗಳಲ್ಲಿ 2200 ರನ್ ದಾಖಲೆ ಹೊಂದಿದ್ದಾರೆ. 26ರ ಹರೆಯದ ಐಯ್ಯರ್, ಭಾರತ ಅಂಡರ್ 19, ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್, ಇಂಡಿಯಾ ಬ್ಲೂ, ಇಂಡಿಯಾ ಗ್ರೀನ್ ತಂಡಗಳ ಪರ ಆಡಿದ್ದಾರೆ.