ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ವಿಭಿನ್ನ ತಂತ್ರಗಾರಿಕೆಯಿಂದ ಕಣಕ್ಕೆ ಇಳಿಯಲಿದ್ದಾರೆ ಶ್ರೇಯಸ್ ಅಯ್ಯರ್
ಜನವರಿ 25 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಆಟದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅಯ್ಯರ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸರಣಿಗಾಗಿ ಅವರು ವಿಶೇಷ ಯೋಜನೆಯನ್ನು ಮಾಡಿದ್ದಾರೆ. ಇಂಗ್ಲೆಂಡ್ ಆಟಗಾರರು ತಮ್ಮ ನ್ಯೂನತೆಯನ್ನು ಗುರುತಿಸಿ ಖೆಡ್ಡಾ ತೋಡಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ತಯಾರಿಗಾಗಿ ಶ್ರೇಯಸ್ ರಣಜಿ ಪಂದ್ಯಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಕ್ರಿಕ್‌ಬಜ್‌ನೊಂದಿಗೆ ಅಯ್ಯರ್ ಮಾತನಾಡಿದ್ದಾರೆ. ಎಂತಹ ಪರಿಸ್ಥಿತಿಯಿದ್ದರೂ ನಾನು ಆಕ್ರಮಣಕಾರಿ ಕ್ರಿಕೆಟ್ ಆಡಲಿದ್ದೇನೆ. ನೀವು ಕೆಟ್ಟ ಎಸೆತಗಳನ್ನು ಹಾಕಿದ ಮಾತ್ರ ದಂಡಿಸುತ್ತೇನೆ. ಇಲ್ಲವಾದಲ್ಲಿ ಆ ಚೆಂಡಿಗೆ ನೀಡಬೇಕಾದ ಸಮ್ಮಾನವನ್ನು ನೀಡುತ್ತೇನೆ. ನಾನು ಹಾಕಿಕೊಂಡ ಯೋಜನೆಗಳಿಂದ ಮೈದಾನದಲ್ಲಿ ಅಬ್ಬರಿಸಲು ಸಜ್ಜಾಗಿದ್ದೇನೆ. ಇದರಿಂದ ತಂಡಕ್ಕೆ ಅನುಕೂಲವಾಗುತ್ತದೆ. ಪರಿಸ್ಥಿತಿ ಎಂತಹದ್ದೇ ಇದ್ದರೂ ರನ್ ಗಳಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲೂ ಶ್ರೇಯಸ್ ಅಯ್ಯರ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಅಯ್ಯರ್ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಬೇಕೆಂದು ಬಿಸಿಸಿಐ ಬಯಸಿದೆ. ಆದ್ದರಿಂದ ಅಭ್ಯಾಸಕ್ಕಾಗಿ ರಣಜಿ ಟ್ರೋಫಿ ಪಂದ್ಯಗಳನ್ನು ಆಡಲು ಅಯ್ಯರ್ ಅವರನ್ನು ಕಳುಹಿಸಿದೆ. ಆದಾಗ್ಯೂ, ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅವರ ಸವಾಲನ್ನು ಅಯ್ಯರ್ ಎದುರಿಸಬೇಕಾಗಬಹುದು.
ಕಳೆದ ಒಂದು ವರ್ಷದಲ್ಲಿ ಅಯ್ಯರ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ತಂಡದ ಮ್ಯಾನೇಜ್‌ಮೆಂಟ್ ಈಗ ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಟ್ಟಿದ್ದು, ಈ ಸ್ಥಾನದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್ ಬ್ಯಾಟ್ ಮಾಡುತ್ತಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅಯ್ಯರ್ ಈ ಸ್ಥಾನದಲ್ಲಿ ಉತ್ತಮವಾಗಿ ಆಡಿದ್ದರು. ಆದರೆ ನಂತರ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿಯಬೇಕಾಯಿತು.
ಇದೀಗ ಅಯ್ಯರ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇದು ಉತ್ತಮ ಅವಕಾಶ ಸಿಕ್ಕಿದೆ. ಅಯ್ಯರ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ ಟೀಂ ಇಂಡಿಯಾ ಅವರಿಗೆ ವಿಶ್ರಾಂತಿ ನೀಡಿ ಬೇರೆ ಆಟಗಾರರತ್ತ ಮುಖ ಮಾಡಲಿದೆ.

ಹೇಗಿದೆ ಶ್ರೇಯಸ್ ರಣಜಿಯಲ್ಲಿ ಪ್ರದರ್ಶನ
ಆಂಧ್ರ ವಿರುದ್ಧ ನಡೆದಿದ್ದ ರಣಜಿ ಟೂರ್ನಿಯ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಶ್ರೇಯಸ್, ಸ್ಥಿರ ಪ್ರದರ್ಶನ ನೀಡಿದ್ದರು. ದೊಡ್ಡ ಇನ್ನಿಂಗ್ಸ್ ಕಟ್ಟದೇ ಇದ್ದರೂ ಕ್ರೀಸ್‌ನಲ್ಲಿ ನೆಲೆ ಊರುವ ಸೂಚನೆ ನೀಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ 48 ರನ್ ಬಾರಿಸಿ ಅಬ್ಬರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಸರಣಿಯಲ್ಲೂ ಆಡುವ ಅವಕಾಶವನ್ನು ಪಡೆದಿದ್ದ ಶ್ರೇಯಸ್ ನಿರಾಸೆ ಅನುಭವಿಸಿದ್ದರು. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 13.66ರ ಸರಾಸರಿಯಲ್ಲಿ 70 ರನ್ ಕಲೆ ಹಾಕಿದ್ದರು.
ಶ್ರೇಯಸ್ ಅಯ್ಯರ್ ತವರಿನಲ್ಲಿ ಅಬ್ಬರಿಸಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬೇಕಿದೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications