ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಅವರ ಮುಡಿಗೆ ಐಸಿಸಿ ಗರಿ ಸಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ ತಿಂಗಳ ಆಟಗಾರ ಪ್ರಶಸ್ತಿ ಪಡೆದು ಬೀಗಿದ್ದಾರೆ. ಮಾರ್ಚ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಶ್ರೇಯಸ್ ಮುಡಿಗೆ ಪ್ರಶಸ್ತಿ ಸಂದಿದೆ. ಇವರು ನ್ಯೂಜಿಲೆಂಡ್ ತಂಡದ ಜಾಕೋಬ್ ಡಫಿ ಮತ್ತು ರಚಿನ್ ರವೀಂದ್ರ ಅವರನ್ನು ಮಣಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಇತ್ತೀಚಿಗೆ ಪಾಕಿಸ್ತಾನ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಈ ವೇಳೆ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದರು. ಇವರ ಭಾರತ ತಂಡದ ಪರ ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇವರು ಪಂದ್ಯಾವಳಿಯಲ್ಲಿ 243 ರನ್ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಟೂರ್ನಿಯ ಉದ್ದಕ್ಕೂ ಪ್ರಮುಖ ಇನಿಂಗ್ಸ್‌ಗಳನ್ನು ಆಡಿದ್ದ ಶ್ರೇಯಸ್, ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿದ್ದಾರೆ.

ಈ ಬಗ್ಗೆ ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಪ್ರತಿಕ್ರಿಯೆ ಹಂಚಿಕೊಂಡಿದೆ. ಈ ವೇಳೆ ಶ್ರೇಯಸ್, ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಪ್ರಶಸ್ತಿಗೆ ಆಯ್ಕೆ ಆಗಿರುವುದು ಗೌರವ ತಂದಿದೆ. ಎಂದು ಶ್ರೇಯಸ್ ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ತಿಂಗಳಿನಲ್ಲಿ ಈ ಪ್ರಶಸ್ತಿ ಸಂದಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದ್ದಾರೆ. ಇವರ ಸ್ಥಿರ ಪ್ರದರ್ಶನ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ನೆರವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಇವರು 79 ಎಸೆತಗಳಲ್ಲಿ 98 ರನ್ ಸಿಡಿಸಿದ್ದರು. ಇದರಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳು ಸೇರಿದ್ದವು. ಇನ್ನು ಆಸೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಸ್ 45 ರನ್ ಬಾರಿಸಿ ಮಿಂಚಿದ್ದರು. ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್62 ರನ್ ಬಾರಿಸಿ ಭಾರತಕ್ಕೆ ನೆರವಾಗಿದ್ದರು.

ಕಳೆದ ವರ್ಷದ ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಿಂದ ದೂರ ಉಳಿದಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಬಿಸಿಸಿಐ ಗಮನ ಸೆಳೆದಿದ್ದಾರೆ. ಇವರಿಗೆ ಮತ್ತೆ ಬಿಸಿಸಿಐ ಮಣೆ ಹಾಕುವ ಅವಶ್ಯಕತೆ ಇದೆ. ದೇಶೀಯ ಟೂರ್ನಿಗಳಲ್ಲಿ ಅಯ್ಯರ್ ಆಡದ ಕಾರಣ ಅವರನ್ನು ಬಿಸಿಸಿಐ ಶಿಕ್ಷಿಸಿತ್ತು. ಈಗ ಶ್ರೇಯಸ್ ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ಮತ್ತೆ ಕೇಂದ್ರ ಒಪ್ಪಂದವನ್ನು ಪಡೆಯುವ ಕನಸಿನಲ್ಲಿದ್ದಾರೆ.
ಸದ್ಯ ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ತಂಡಕ್ಕೆ ನೆರವಾಗುತ್ತಿದ್ದಾರೆ. ಅಲ್ಲದೆ ತಮ್ಮ ನಾಯಕತ್ವದ ಸ್ಕಿಲ್‌ಗಳಿಂದ ಮನೆ ಮಾತಾಗಿದ್ದಾರೆ.