ಟೀಮ್ ಇಂಡಿಯಾದ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್, ಟೆಸ್ಟ್ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೇಯಸ್, ವೈಟ್ ಜೆರ್ಸಿಯಲ್ಲಿ ಕಮಾಲ್ ಪ್ರದರ್ಶನ ನೀಡುವ ಆಸೆಯನ್ನು ಹೊಂದಿದ್ದರು. ಆದರೆ ಈ ಕನಸಿಗೆ ಆರಂಭದಲ್ಲಿ ಪೆಟ್ಟು ಬಿದ್ದಿದೆ.
ಇಂಗ್ಲೆಂಡ್ ವಿರುದ್ಧ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್, ಮುಂದಿನ ಮುರು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದರು. ಅಲ್ಲದೆ ಗಾಯ ಚೇತರಿಸಿಕೊಂಡ ಬಳಿಕ ದೇಶೀಯ ಟೂರ್ನಿಯಲ್ಲಿ ಆಡುವಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸೂಚಿಸಿತ್ತು. ಆರಂಭದಲ್ಲಿ ಇದನ್ನು ಧಿಕ್ಕರಿಸಿದ್ದ ಶ್ರೇಯಸ್, ಕೊನೆಗೆ ಮುಂಬೈ ಪರ ರಣಜಿ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಐಪಿಎಲ್ 2024ರಲ್ಲಿ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಆಯ್ಕೆ ಆದರು. ಇಲ್ಲಿಂದ ಶ್ರೇಯಸ್ ಅಯ್ಯರ್ ಅವರ ಲಕ್ ಕೊಂಚ ಬದಲಾಯಿತು. ಉತ್ತಮ ಆಟಗಾರರು, ಉತ್ತಮ ಕೋಚ್ ಅಡಿಯಲ್ಲಿ ಆಡಿದ ಶ್ರೇಯಸ್ ಸ್ಥಿರ ಪ್ರದರ್ಶನ ನೀಡಿದರು. ಅಲ್ಲದೆ ಇವರ ಮುಂದಾಳತ್ವದ ಕೆಕೆಆರ್ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಆಗ ಬಿಸಿಸಿಐ ಆಯ್ಕೆ ಸಮಿತಿ ಇವರನ್ನು ಪರಿಗಣಿಸುವಂತೆ ಮಾಡಿತು.
ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಸೇರುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸಿತ್ತು. ಆಗಲೇ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸಿತು. ರಾಹುಲ್ ದ್ರಾವಿಡ್ ಸ್ಥಾನವನ್ನು ಗೌತಮ್ ಗಂಭೀರ್ ಅವರು ತುಂಬಿದರು. ಇವರ ಮುಂದಾಳತ್ವದಲ್ಲಿ ಭಾರತ ತಂಡ ಮೊದಲ ಸವಾಲು ಶ್ರೀಲಂಕಾದಲ್ಲಿ ಎದುರಾಯಿತು. ಈ ವೇಳೆ ಟೀಮ್ ಇಂಡಿಯಾದಲ್ಲಿ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯಲು ಸಫಲರಾದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುವಲ್ಲಿ ವಿಫಲರಾದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇವರು ಮತ್ತೆ ಮರಳುವುದು ಅನುಮಾನ ಎಂದೇ ಗೋಚರವಾಗುತ್ತಿತ್ತು. ಆದರೆ ಶ್ರೇಯಸ್ ಈ ಸವಾಲನ್ನು ಮೆಟ್ಟಿ ನಿಲ್ಲಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡರು. ಬುಚ್ಚಿ ಬಾಬು ಟೂರ್ನಿಯಲ್ಲಿ ಬ್ಯಾಟ್ ಮಾಡಲು ಮುಂದಾದರು. ಈ ವೇಳೆ ಮುಂಬೈ ಪರ ಬ್ಯಾಟ್ ಮಾಡಿದ ಶ್ರೇಯಸ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ನನಗೆ ಇನ್ನೊಂದು ಅವಕಾಶ ಇದ್ದೇ ಇದೆ ಎಂದು ಭಾವಿಸಿದ್ದ ಶ್ರೇಯಸ್ ಅಯ್ಯರ್, ದುಲೀಪ್ ಟ್ರೋಫಿಯಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದರು.
ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್, ಭಾರತ 'ಡಿ' ತಂಡದ ಪರ ಕಣಕ್ಕೆ ಇಳಿದಿರು. ಅನಂತಪುರದಲ್ಲಿ ನಡೆಯುತ್ತಿರುವ ಭಾರತ 'ಡಿ' ಹಾಗೂ ಭಾರತ 'ಸಿ' ನಡುವಣ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ, ಶ್ರೇಯಸ್ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.
ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಸೆಪ್ಟೆಂಬರ್ 19 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗೆ ಇನ್ನು ಭಾರತ ತಂಡದ ಆಯ್ಕೆಯನ್ನು ಮಾಡಲಾಗಿಲ್ಲ. ಈ ತಂಡದಲ್ಲಿ ಸ್ಥಾನ ಪಡೆಯುವ ಕನಸು ಶ್ರೇಯಸ್ ಅಯ್ಯರ್ ಅವರದ್ದಾಗಿತ್ತು. ಆದರೆ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ರನ್ ಬರ ಅನುಭವಿಸಿದ್ದು, ಟೆಸ್ಟ್ ತಂಡ ಸೇರುವ ಶ್ರೇಯಸ್ ಕನಸನ್ನು ದೂರ ಸರಿಯುವಂತೆ ಮಾಡಿದೆ.