ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಪಾಲಿಗೆ 2023 ಅತ್ಯಂತ ಸ್ಮರಣೀಯ ವರ್ಷ. ಎಲ್ಲಾ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನಿಡಿರುವ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವರ್ಷ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದ್ದಾರೆ. ಈ ವರ್ಷ 2000 ಅಂತಾರಾಷ್ಟ್ರೀಯ ರನ್‌ಗಳನ್ನು ಸಿಡಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಶುಬ್ಮನ್ ಗಿಲ್.
ನೆದರ್ಲೆಂಡ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಬ್ಮನ್ ಗಿಲ್ ಭರ್ಜರಿ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ 2000 ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೇವಲ 17 ರನ್‌ಗಳನ್ನು ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ ಶುಬ್ಮನ್ ಗಿಲ್. ಇನ್ನು ಇವರ ಜೊತೆಗೆ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಬಾರಿಸಿದ್ದಾರೆ.

ಈ ವರ್ಷ 43 ಪಂದ್ಯಗಳನ್ನು ಆಡಿರುವ ಶುಬ್ಮನ್ ಗಿಲ್ 49.60 ರ ಸರಾಸರಿಯಲ್ಲಿ 2034 ರನ್ ಗಳಿಸಿದ್ದಾರೆ. ಏಳು ಶತಕ ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ 101.80 ಸ್ಟ್ರೈಕ್ ರೇಟ್‌ಗಳನ್ನು ಗಳಿಸಿದ್ದಾರೆ. ಇನ್ನು ಶುಬ್ಮನ್ ಈ ವರ್ಷ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ. ಈ ವರ್ಷ ಏಕದಿನ ಪಂದ್ಯಗಳಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ, ನಿಸ್ಸಾಂಕ, ರೋಹಿತ್, ಮಿಚೆಲ್, ಬಾಬರ್ ಮತ್ತು ರಿಜ್ವಾನ್ ಅವರೊಂದಿಗೆ ಏಳು ಬ್ಯಾಟರ್‌ಗಳಲ್ಲಿ ಫಾಜಿಲ್ಕಾ ಸಂಜಾತ ಬ್ಯಾಟರ್ ಕೂಡ ಸೇರಿದ್ದಾರೆ.
ಈ ಮಧ್ಯೆ ಶುಬ್ಮನ್ ಗಿಲ್ ತಮ್ಮ 2023ರಲ್ಲಿ ಆಡಿದ 27ನೇ ಇನ್ನಿಂಗ್ಸ್‌ನಲ್ಲಿ 1500 ಏಕದಿನ ರನ್‌ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ (27) ಮತ್ತು ಮ್ಯಾಥ್ಯೂ ಹೇಡನ್ (27) ಜೊತೆಗೆ ಕ್ಯಾಲೆಂಡರ್ ವರ್ಷದಲ್ಲಿ 1500 ಏಕದಿನ ರನ್‌ಗಳನ್ನು ವೇಗವಾಗಿ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಮಸಾಧನೆ ಮಾಡಿದ್ದಾರೆ.
ಇನ್ನು ಈ ವಿಶ್ವಕಪ್ ಟೂರ್ನಿಗೂ ಮುನ್ನ ಶುಬ್ಮನ್ ಗಿಲ್ ಹಾಶಿಮ್ ಆಮ್ಲ ಹೆಸರಿನಲ್ಲಿದ್ದ ಅತ್ಯಂತ ವೇಗವಾಗಿ ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ 2000 ರನ್‌ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಇತ್ತೋಚೆಗಷ್ಟೇ ಅವರು ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ಬಾಬರ್ ಅಜಂ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.