ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧ ಪಡಿಸಿಕೊಳ್ಳುತ್ತಿದೆ. ಭಾರತದ ಭರವಸೆಯ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿದಿದ್ದು ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮತ್ತೊಂದು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಪ್ರಸಕ್ತ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಮೂರನೇ ಟೆಸ್ಟ್ ಪಂದ್ಯವನ್ನು ಹೊರತು ಪಡಿಸಿದರೆ ಬೇರೆ ಎಲ್ಲ ಟೆಸ್ಟ್ ಪಂದ್ಯಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಟೀಮ್ ಇಂಡಿಯಾದ ನಾಯಕ ಪ್ರಸಕ್ತ ಸರಣಿಯಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅಲ್ಲದೆ ಈಗ ಮತ್ತಷ್ಟು ಹೊಸ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲಿ ಗಿಲ್ ಹೇಗೆ ಬ್ಯಾಟ್ ಮಾಡುತ್ತಾರೇ ಎಂಬುದೇ ದೊಡ್ಡ ಸವಾಲಾಗಿದ್ದು, ಇವರು ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿ ನಿಂತಿದ್ದಾರೆ.

ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಈ ಸರಣಿಯಲ್ಲಿ ರನ್ ಮಹಲ್ ಕಟ್ಟಿದ್ದಾರೆ. ಆಡಿರುವ ಮೂರು ಪಂದ್ಯಗಳ 6 ಇನಿಂಗ್ಸ್‌ಗಳಲ್ಲಿ ಗಿಲ್ ಆರ್ಭಟಿಸಿದ್ದಾರೆ. ಇವರು ಈ ಸರಣಿಯಲ್ಲಿ 101.16ರ ಸರಾಸರಿಯಲ್ಲಿ 607 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ. ಗಿಲ್ ತಮ್ಮ ಅಮೋಘ ಫಾರ್ಮ್‌ನ್ನು ಮುಂದಿನ ಪಂದ್ಯದಲ್ಲೂ ಮುಂದುವರೆಸಿದರೆ, 54 ವರ್ಷಗಳ ಹಳೆಯ ದಾಖಲೆಗೆ ಅಪಾಯ ಕಾದಿದೆ.
ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 1970ರಲ್ಲಿ ಆರ್ಭಟಿಸಿದ್ದರು. ಈ ಪ್ರವಾಸದಲ್ಲಿ ಇವರು ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 154.80ರ ಸರಾಸರಿಯಲ್ಲಿ 4 ಶತಕ ಹಾಗೂ 3 ಅರ್ಧಶತ ಸಿಡಿಸಿದ್ದರು. ಈ ವೇಳೆ ಇವರ ಬ್ಯಾಟ್‌ನಿಂದ 774 ರನ್ ಹರಿದು ಬಂದಿದ್ದವು. ಭಾರತೀಯ ಬ್ಯಾಟರ್ ಆಗಿ ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಹೆಗ್ಗಳಿಕೆ ಸುನಿಲ್ ಗವಾಸ್ಕರ್ ಅವರಿಗೆ ಸಲ್ಲುತ್ತದೆ. ಈ ದಾಖಲೆಯ ಮೇಲೆ ಸದ್ಯ ಗಿಲ್ ಕಣ್ಣು ನೆಟ್ಟಿದ್ದಾರೆ.

ಗಿಲ್ ಅವರಿಗೆ ಇನ್ನು ಈ ಟೆಸ್ಟ್ ಸರಣಿಯಲ್ಲಿ ಇನ್ನು 4 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಗಲಿದೆ. ಈ ವೇಳೆ ಇವರು 167 ರನ್ ಸಿಡಿಸಿದರೆ ಸುನಿಲ್ ಗವಾಸ್ಕರ್ ದಾಖಲೆಯನ್ನು ಮುರಿಯಬಲ್ಲರು.
ಸುನಿಲ್ ಗವಾಸ್ಕರ್, 774 ರನ್
ಸುನಿಲ್ ಗವಾಸ್ಕರ್, 732 ರನ್
ಯಶಸ್ವಿ ಜೈಸ್ವಾಲ್, 712 ರನ್
ವಿರಾಟ್ ಕೊಹ್ಲಿ, 692 ರನ್
ವಿರಾಟ್ ಕೊಹ್ಲಿ, 655 ರನ್