ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ತಮಗೆ ನಾಯಕತ್ವ ಸಿಗುತ್ತಿದ್ದಂತೆ ಅಪ್‌ಡೇಟ್ ವರ್ಷನ್‌ನೊಂದಿಗೆ ಕಾಣಿಸಿಕೊಂಡಿದ್ದು, ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ್ದಾರೆ. ತಾವು ನಾಯಕತ್ವ ವಹಿಸಿಕೊಂಡ ಮೊದಲ ಪ್ರಯತ್ನದಲ್ಲೇ ಗಿಲ್ ರನ್ ಮಹಲ್ ಕಟ್ಟಿದ್ದಾರೆ. ಸೇನಾ (ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ) ರಾಷ್ಟ್ರದಲ್ಲಿ ಈ ಮೊದಲು ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದ್ದು, ಶುಭಮನ್ ಗಿಲ್ ನಾಯಕತ್ವ ಸಿಗುತ್ತಲೇ ಶತಕದ ಮೇಲೆ ಶತಕ ಸಾಧನೆ ಮಾಡಿದ್ದಾರೆ. ಶುಭಮನ್ ಗಿಲ್ ಅವರ ಜಲ್ವಾ ಬರೀ ಅಂಗಳದಲ್ಲಿ ಅಷ್ಟೇ ಅಲ್ಲಾ, ಮೈದಾನದ ಹೊರಗೂ ಇದೇ ಹವಾ ಮುಂದುವರೆಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಶುಭಮನ್ ಗಿಲ್ 5 ಟೆಸ್ಟ್ ಪಂದ್ಯಗಳಳ 10 ಇನಿಂಗ್ಸ್‌ಗಳಲ್ಲಿ 75ರ ಸರಾಸರಿಯಲ್ಲಿ 754 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಶುಭಮನ್ ಗಿಲ್ ಈ ಸರಣಿಯಲ್ಲಿ ಒಂದು ದ್ವಿಶತಕ ಸೇರಿದಂತೆ ನಾಲ್ಕು ಶತಕ ಬಾರಿಸಿದ್ದಾರೆ. ಪರಿಣಾಮ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2ರಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ತಮ್ಮಲ್ಲೂ ನಾಯಕತ್ವದ ಗುಣಗಳು ಇವೆ ಎಂಬುದನ್ನು ಸಾಬೀತು ಪಡಿಸಿದರು. ಇದೇ ಇವರ ಕ್ರೇಜ್ ಮೈದಾನದ ಹೊರಗೂ ಹೆಚ್ಚಾಗಿದೆ ಎಂಬುದಕ್ಕೆ ದತ್ತಿ ಹರಾಜು ಸಾಕ್ಷಿಯಾಯಿತು.

ಇಂಗ್ಲೆಂಡ್‌ನಲ್ಲಿ ನಡೆದ ದತ್ತಿ ಹರಾಜಿನಲ್ಲಿ ಗಿಲ್ ಅವರ ಜನಪ್ರಿಯತೆ ಕಂಡು ಬಂದಿದೆ. ಶುಭಮನ್ ಗಿಲ್ ಧರಿಸಿದ್ದ ಜೆರ್ಸಿಯಲ್ಲಿ ಖರೀದಿಸಲು ಜನ ತಾ ಮುಂದೆ ನಾ ಮುಂದೆ ಎಂದು ಮುಗಿ ಬಿದ್ದಿದ್ದಾರೆ. ಈ ದತ್ತಿ ಹರಾಜಿನಲ್ಲಿ ಶುಭಮನ್ ಗಿಲ್ ಜೆರ್ಸಿ 5.40 ಲಕ್ಷ ರೂ. ದುಬಾರಿ ಬೆಲೆಗೆ ಮಾರಾಟವಾಗಿದೆ. ಈ ಹರಾಜಿನಲ್ಲಿ ಟೀಮ್ ಇಂಡಿಯಾ ಆಟಗಾರ ಜೆರ್ಸಿಗಳೇ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ. ಈ ಹಾರಜಿನಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋ ರೂಟ್ ಅವರ ಜೆರ್ಸಿಗೂ ಹೆಚ್ಚಿನ ಬೇಡಿಕೆ ಕಂಡು ಬಂದಿತು.
ದತ್ತಿ ಹರಾಜಿನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ತೊಟ್ಟಿದ್ದ ಜೆರ್ಸಿಗೆ 4.71 ಲಕ್ಷ ರೂ ಮಾರಾಟವಾಗಿದೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ 4.94 ಲಕ್ಷ ರೂ., ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಜೆರ್ಸಿ 4.94 ಲಕ್ಷ ರೂ.ಗಳಿಗೆ ಮಾರಾವಾಗಿದೆ. '#REDFORRUTH SPECIAL TIMED AUCTION' ಎಂಬ ಹೆಸರಿನಲ್ಲಿ ಹರಾಜು ನಡೆದಿದೆ. ಈ ಹರಾಜು ಪ್ರಕ್ರಿಯೆ ಜುಲೈ 10 ರಿಂದ ಜುಲೈ 27 ರವರೆಗೆ ನಡೆದಿದ್ದು, ಈ ಹರಾಜಿನಿಂದ ಬಂದ ಸಂಪೂರ್ಣ ಮೊತ್ತವನ್ನು ರುತ್ ಸ್ಟ್ರಾಸ್ ಫೌಂಡೇಶನ್‌ಗೆ ನೀಡಲಾಗುತ್ತದೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ಈ ಹಣವನ್ನು ಬಳಸಲಾಗುತ್ತದೆ.

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ರೆಡ್ ಫಾರ್ ರೂತ್ ದಿನವನ್ನು ಆಚರಿಸಲಾಗುತ್ತದೆ. ಇದೇ ದಿನ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಕೆಂಪು ಬಣ್ಣದ ಜೆರ್ಸಿಗಳನ್ನು ಹೊಂದಿರುವ ಜೆರ್ಸಿಗಳನ್ನು ತೊಟ್ಟು ಮೈದಾನಕ್ಕೆ ಇಳಿದರು. ಶ್ವಾಸಕೋಶದ ಕ್ಯಾನ್ಸರ್ ನಿಂದ ನಿಧನರಾದ ಇಂಗ್ಲೆಂಡ್‌ನ ಮಾಜಿ ನಾಯಕ ಸರ್ ಆಂಡ್ರ್ಯೂ ಸ್ಟ್ರಾಸ್ ಅವರ ದಿವಂಗತ ಪತ್ನಿ ರುತ್ ಸ್ಟ್ರಾಸ್ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.