2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಂಡದ ಉಪನಾಯಕರಾಗಿ ಬಡ್ತಿ ಪಡೆದು, ಬಹು ದಿನಗಳ ಬಳಿಕ ಟಿ20 ತಂಡ ಸೇರಿದ್ದ ಶುಭಮನ್ ಗಿಲ್, ಅವರು 15 ಆಟಗಾರರ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಶುಭಮನ್ ಗಿಲ್ ಅವರನ್ನು ಕೈಬಿಟ್ಟ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಟೀಮ್ ಇಂಡಿಯಾವನ್ನು ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಶುಭಮನ್ ಗಿಲ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಏಷ್ಯಾ ಕಪ್ ಟಿ20 ಹಾಗೂ ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಗಿಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಆಗಿನಿಂದಲೇ ಇವರ ಸ್ಥಾನದ ಮೇಲೆ ಪ್ರಶ್ನೆಗಳು ಎದ್ದಿದ್ದವು.

ಶನಿವಾರ ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸುವಾಗ ಎಲ್ಲರ ಕಣ್ಣುಗಳು ಶುಭಮನ್ ಗಿಲ್ ಅವರ ಮೇಲೆ ನೆಟ್ಟಿದ್ದವು. ಆದರೆ ಗಿಲ್ ಟಿ20 ತಂಡದಿಂದ ಹೊರ ನಡೆದಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶುಭಮನ್ ಗಿಲ್, ಚುಟುಕು ಫಾರ್ಮೆಟ್‌ನಲ್ಲಿ ರನ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಇವರ ಆಟದ ಮೇಲೆ ಟೀಕೆಗಳು ಕೇಳಿ ಬಂದಿದ್ದವು. ಇವರು ಭಾರತದ ಪರ 36 ಟಿ20 ಪಂದ್ಯಗಳನ್ನು ಆಡಿದ್ದು 1 ಶತಕ ಹಾಗೂ 3 ಅರ್ಧಶತಕದ ನೆರವಿನಿಂದ 869 ರನ್ ಸಿಡಿಸಿದ್ದಾರೆ.
ಶುಭಮನ್ ಗಿಲ್ ಆಗಮನದಿಂದ ತಂಡದಿಂದ ಸ್ಥಾನ ಕಳೆದುಕೊಂಡಿದ್ದ ಸಂಜು ಸ್ಯಾಮ್ಸನ್ ಮತ್ತೆ ಟಿ20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಹಾಗೂ ಟಾಪ್ ಆರ್ಡರ್ ಬ್ಯಾಟರ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಹೆಸರುವಾಸಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಈಗಾಗಲೇ ಭಾರತದ ಪರ 52 ಟಿ20 ಪಂದ್ಯಗಳನ್ನು ಆಡಿದ್ದು, 25ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 148.06 ಆಗಿದೆ. ಸಂಜು ಟಿ20 ಕ್ರಿಕೆಟ್‌ನಲ್ಲಿ 3 ಶತಕ ಹಾಗೂ 3 ಅರ್ಧಶತಕ ಬಾರಿಸಿ ತಮ್ಮ ಕ್ಷಮತೆ ಪ್ರದರ್ಶಿಸಿದ್ದಾರೆ. ಹೀಗಾಗಿ ತಂಡ ಇವರಿಗೆ ಮಣೆ ಹಾಕಿದೆ.
ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಟ್ಟ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ. ಗಿಲ್ ಟಿ20 ಸ್ವರೂಪದಲ್ಲಿ ರನ್ ಗಳಿಸಲು ಕಷ್ಟ ಪಡುತ್ತಿದ್ದಾರೆ. ನಾವು ತಂಡವನ್ನು ಕಟ್ಟುವಾಗ ಯಾರಾದ್ರೂ ಒಬ್ಬರು ಹೊರಗುಳಿಯಲೇ ಬೇಕಾಗುತ್ತದೆ. ಗಿಲ್ ಹೊರಗುಳಿದಿದ್ದು ದುರಾದೃಷ್ಟ. ತಂಡ ಟಾಪ್ ಆರ್ಡರ್ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ನೋಡುತ್ತಿದ್ದು ಹೀಗಾಗಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಹ ಈ ಬಗ್ಗೆ ಮಾತನಾಡಿದ್ದಾರೆ. ಗಿಲ್ ಅವರ ಫಾರ್ಮ್ ಒಂದೇ ಕಾರಣದಿಂದ ಅವರನ್ನು ಹೊರಗಡೆ ಇಟ್ಟಿಲ್ಲ. ತಂಡದ ಸಂಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಆರಂಭಿಕರಾಗಿ ವಿಕೆಟ್ ಕೀಪರ್ ಒಬ್ಬರು ಇರಲಿ ಎಂಬ ಉದ್ದೇಶದಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ. ಅಲ್ಲದೆ ತಂಡ ಆಯ್ಕೆ ಮಾಡಿದ ಬ್ಯಾಕ್ ಅಪ್ ವಿಕೆಟ್ ಕೀಪರ್ ಇಶಾನ್ ಕಿಶನ್ ಸಹ ಆರಂಭಿಕ ಆಟಗಾರ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.