
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡದಲ್ಲಿನ ಆಟಗಾರರ ಕ್ರಮಾಂಕದಲ್ಲಿ ಕೆಲ ಅನಿವಾರ್ಯ ಬದಲಾವಣೆಗಳನ್ನು ಮಾಡುವ ಅನಿವಾರ್ಯತೆಯಿದೆ. ಆರಂಭಿಕ ಆಟಗಾರರಿಂದ ಹಿಡಿದು ಕೆಳ ಕ್ರಮಾಂಕದವರೆಗೆ ಭಾರತದ ಆಟಗಾರಿಗೆ ಸೂಕ್ತ ಕ್ರಮಾಂಕವನ್ನು ನೀಡುವ ಬಗ್ಗೆ ಈಗಾಗಲೇ ಸಾಕಷ್ಟು ಸಲಹೆಗಳು ಕೂಡ ಬರುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು, ವಿಶ್ಲೇಷಕರು ಈ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ವೇದಿಕೆಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆ ಮಂಡಳಿಯ ಮಾಜಿ ಸದಸ್ಯ ಜತಿನ್ ಪರಂಜಪೆ ಟೀಮ್ ಇಂಡಿಯಾದಲ್ಲಿ ಯುವ ಆಟಗಾರ ಶುಬ್ಮನ್ ಗಿಲ್ ಈ ಸರಣಿಯಲ್ಲಿ ಬೇರೆ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶುಬ್ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಉತ್ತಮ ಇದರಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ ಎಂದಿದ್ದಾರೆ.
ನವೆಂಬರ್ 25ರಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಈ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಲಿರುವ ಕಾರಣದಿಂದಾಗಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗಾಗಿ ಶುಬ್ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಟೀಮ್ ಇಂಡಿಯಾದ ಆಯ್ಕೆಗಾರರಿಗೂ ಕೂಡ ಇದೊಂದು ಉತ್ತಮ ಅವಕಾಶವಾಗಿದ್ದು ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರ ದೀರ್ಘ ಕಾಲಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಸಾಧ್ಯತೆಯಿದೆಯಾ ಎಂಬುದನ್ನು ಪರೀಕ್ಷಿಸಿದಂತಾಗುತ್ತದೆ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರು ತಂಡಕ್ಕೆ ಮರಳುವ ಹಿನ್ನೆಲೆಯಲ್ಲಿ ಈ ಪರೀಕ್ಷೆ ಉತ್ತಮ ನಿರ್ಧಾರವಾಗಬಹುದು ಎಂದಿದ್ದಾರೆ ಪರಂಜಪೆ.
ಕಳೆದ ಆಸ್ಟ್ರೇಲಿಯಾ ಪ್ರವಾಸಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದಾಗ ಅಂದಿನ ಆಯ್ಕೆ ಮಂಡಳಿಯಲ್ಲಿ ಸದಸ್ಯರಾಗಿದ್ದರು ಜತಿನ್ ಪರಂಜಪೆ. ಈಗ ಅವರು ಮಧ್ಯಮ ಕ್ರಮಾಂಕದಲ್ಲಿ ಶುಬ್ಮನ್ ಗಿಲ್ ಅವರನ್ನು ಪರೀಕ್ಷಿಸುವುದು ಕೆಟ್ಟ ನಿರ್ಧಾರವಾಗಲಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಪ್ರಕಾರ ಆಯ್ಕೆ ಮಂಡಳಿಯಲ್ಲಿ ಕಠಿಣತೆಯಿಂದಿದ್ದರೆ ಅದು ಆಯ್ಕೆಗೆ ಸಹಕಾರಿಯಾಗಿರುವುದಿಲ್ಲ. ನನ್ನ ಪ್ರಕಾರ ಶುಬ್ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡುವುದು ತಂಡಕ್ಕೆ ಸಹಕಾರಿಯಾಗಲಿದೆ. ಈ ರೀತಿಯ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಯಾವಾಗಲೂ ಸಹಕಾರಿಯಾಗಿರುತ್ತದೆ" ಎಂದಿದ್ದಾರೆ ಪರಂಜಪೆ.
ಭಾರತದ ಪಿಚ್‌ಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಡುವುದು ಹೆಚ್ಚಿನ ವ್ಯತ್ಯಾಸ ಮಾಡುವುದಿಲ್ಲ. ವಿದೇಶಿ ಪಿಚ್‌ಗಳಲ್ಲಾದರೆ ಹೊಸ ಚೆಂಡುಗಳನ್ನು ಎದುರಿಸಲು ಹೆಚ್ಚಿನ ನೈಪುಣ್ಯತೆ ಬೇಕಾಗುತ್ತದೆ. ಆದರೆ ಭಾರತದಲ್ಲಿ ಎಸ್‌ಜಿ ಚೆಂಡುಗಳನ್ನು ಬಳಸುವುದರಿಂದಾಗಿ ಅದು ಶೀಘ್ರವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕೆಎಲ್ ರಾಹುಲ್ ಕೂಡ ಆರಂಬದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿ ಉತ್ತಮ ಯಶಸ್ಸು ಕಂಡಿದ್ದಾರೆ. ಶುಬ್ಮನ್ ಗಿಲ್ ಕೂಡ ಅದನ್ನು ಅನುಸರಿಸಬಹುದು" ಎಂದಿದ್ದಾರೆ ಜತಿನ್ ಪರಂಜಪೆ.
ಟೀಮ್ ಇಂಡಿಯಾ ಸ್ಕ್ವಾಡ್: ಅಜಿಂಕ್ಯ ರಹಾನೆ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್-ಕೀಪರ್), ಕೆಎಸ್ ಭರತ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಸರ್ ಪಟೇಲ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.