ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮೆಗಾ ಟೂರ್ನಿಗೂ ಮುನ್ನ ಭಾರತ ತಂಡದ ಯುವ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭರ್ಜರಿ ಗಿಫ್ಟ್ ಕೊಟ್ಟಿದೆ. ಐಸಿಸಿ ಮಾಡಿರುವ ಒಂದು ಘೋಷಣೆಯಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಐಸಿಸಿ ತನ್ನ ಇತ್ತೀಚಿನ ಏಕದಿನ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಶುಭಮನ್ ಗಿಲ್ ಶ್ರೇಯಾಂಕದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
ಶುಭಮನ್ ಗಿಲ್ ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿಶ್ವದ ನಂಬರ್ -2 ಬ್ಯಾಟರ್ ಆಗಿದ್ದಾರೆ. ಶುಭಮನ್ ಗಿಲ್ 781 ರೇಟಿಂಗ್ ಅಂಕಗಳೊಂದಿಗೆ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ತಲುಪಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಗಿಲ್ ಈ ಸಾಧನೆ ಮಾಡಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಸ್ವಲ್ಪ ಸಮಾಧಾನ ತಂದಿದೆ.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ 86.33 ಸರಾಸರಿಯಲ್ಲಿ 259 ರನ್ ಗಳಿಸಿದ್ದರು. ಈ ವೇಳೆ ಗಿಲ್ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಒಟ್ಟು 37 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಶುಭಮನ್ ಗಿಲ್ 'ಸರಣಿ ಶ್ರೇಷ್ಠ' ಪ್ರಶಸ್ತಿಗೂ ಪಾತ್ರರಾಗಿದ್ದರು. ಶುಭಮನ್ ಗಿಲ್ ಈಗ ಪಾಕಿಸ್ತಾನದ ಮಾಜಿ ನಾಯಜ ಬಾಬರ್ ಅಜಮ್ ಅವರೊಂದಿಗಿನ ಏಕದಿನ ಶ್ರೇಯಾಂಕದ ಅಂತರವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಬಾಬರ್ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ಬಾಬರ್ ಅಜಮ್ 786 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ 781 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಅವರ ಹೆಸರು ಮೂರನೇ ಸ್ಥಾನದಲ್ಲಿದೆ.
ಐಸಿಸಿ ಏಕದಿನ ಶ್ರೇಯಾಂಕದಲ್ಲಿ ರೋಹಿತ್ ಶರ್ಮಾ 773 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಶುಭಮನ್ ಗಿಲ್ ಏಕದಿನ ಶ್ರೇಯಾಂಕದಲ್ಲಿ ಬಾಬರ್ ಅಜಮ್ ಗಿಂತ ಕೇವಲ 5 ರೇಟಿಂಗ್ ಪಾಯಿಂಟ್‌ಗಳ ಹಿಂದಿದ್ದಾರೆ. ಫೆಬ್ರವರಿ 9 ರಂದು ಕಟಕ್‌ನಲ್ಲಿ 119 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ರೋಹಿತ್ ಶರ್ಮಾ ಅವರು ಬಾಬರ್ ಅವರಿಗಿಂತ ಕೇವಲ 13 ರೇಟಿಂಗ್ ಪಾಯಿಂಟ್‌ಗಳ ಹಿಂದಿದ್ದಾರೆ.