ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಸೋಲು ಅನುಭವಿಸಿದೆ. ರೋಚಕ ಕಾದಾಟದಲ್ಲಿ ತೀವ್ರ ಪೈಪೋಟಿಯಲ್ಲಿ ಕೊನೆಯ ಕ್ಷಣದವರೆಗೂ ಭಾರತ ಹೋರಾಟ ನಡೆಸಿತಾದರೂ ಸೋಲು ಕಾಣಬೇಕಾಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್‌ನಲ್ಲಿ ಶುಬ್ಮನ್ ಗಿಲ್ ಅಮೋಘ ಶತಕ ಸಿಡಿಸಿ ಅಬ್ಬರಿಸಿದರೆ ಅಕ್ಷರ್ ಪಟೇಲ್ ಭಾರತ ತಂಡದ ಹೋರಾಟವನ್ನು ಕೊನೆಯ ಕ್ಷಣದ ವರೆಗೂ ಜಾರಿಯಲ್ಲಿರಿಸಿದ್ದರು.
ಇನ್ನು ಈ ಸೋಲಿನ ಬಳಿಕ ಮಾತನಾಡಿದ ಯುವ ಆಟಗಾರ ಶುಬ್ಮನ್ ಗಿಲ್ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಸಾಕಷ್ಟು ಸಮಯ ಉಳಿದುಕೊಂಡಿದ್ದರೂ ಲೆಕ್ಕಾಚಾರದಲ್ಲಿ ಎಡವಿದೆ. ಹಾಗಾಗಿ ವಿಕೆಟ್ ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ. ಉಳಿದಿರುವ ಓವರ್‌ಗಳನ್ನು ತಪ್ಪಾಗಿ ಲೆಕ್ಕಾಚಾರ ಮಾಡಿಕೊಂಡೆ ಎಂದ ಅವರು ಇಲ್ಲವಾದಲ್ಲಿ ಪಂದ್ಯವನ್ನು ಮುಗಿಸಬಹುದಾಗಿತ್ತು ಎಂದಿದ್ದಾರೆ.

ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶುಬ್ಮನ್ ಗಿಲ್, "ನಾನು ಬ್ಯಾಟಿಂಗ್ ನಡೆಸುತ್ತಿದ್ದಾಗ, ನಾನು ವಿಕೆಟ್ ಕಳೆದುಕೊಂಡಾಗ ಸಾಕಷ್ಟು ಒತ್ತಡವಿತ್ತು. ಅಂಥಾ ಸಂದರ್ಭದಲ್ಲಿ ನಮ್ಮ ಲೆಕ್ಕಾಚಾರಗಳು ತಪ್ಪಾಗುತ್ತವೆ. ನಾನು ಕೂಡ ಅಲ್ಲಿಯೇ ತಪ್ಪು ಮಾಡಿದೆ ಎನಿಸುತ್ತದೆ. ನಾನು ವಿಕೆ್ಟ ಕಳೆದುಕೊಂಡಾಗ ನಮ್ಮ ಬಳಿ ಇನ್ನು ಕೂಡ ಸಾಕಷ್ಟು ಸಮಯವಿತ್ತು. ನಾನು ಅಷ್ಟು ಆಕ್ರಮಣಕಾರಿಯಾಗಿ ಆಡದೆ ಸಹಜವಾಗಿಯೇ ಬ್ಯಾಟಿಂಗ್ ನಡೆಸಿದ್ದರೂ ಗೆಲುವು ಸಾಧ್ಯವಾಗಿರುತ್ತಿತ್ತು. ಆದರೆ ಅದೃಷ್ಟವಶಾತ್ ಇದು ನಮಗೆ ಕೊನೆಯ ಪಂದ್ಯವಲ್ಲ. ಇಂಥಾ ಸಂದರ್ಭಗಳು ಬ್ಯಾಟರ್ ಆಗಿ ನಿಮಗೆ ಸಾಕಷ್ಟು ವಿಚಾರಗಳನ್ನು ಕಲಿಸುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾದ ಯುವ ದಾಂಡಿಗ ಶುಬ್ಮನ್ ಗಿಲ್.
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರನುಖ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಅವರಂತಾ ಆಟಗಾರರಿಗೆ ಈ ಪಂದ್ಯದಲ್ಲಿ ಯಾಕೆ ವಿಶ್ರಾಂತಿ ನೀಡಲಾಯಿತು ಎನ್ನುವ ಪ್ರಶ್ನೆಗೂ ಗಿಲ್ ಉತ್ತರವನ್ನು ನೀಡಿದರು. ಆಟಗಾರರು ಸತತವಾಗಿ ಮೂರು ದಿನಗಳ ಕಾಲ ಮೈದಾನದಲ್ಲಿದ್ದರು. ಫೈನಲ್ ಪಂದ್ಯಕ್ಕೆ ಅವರು ಫ್ರೆಶ್ ಆಗಿರುವ ಉದ್ದೇಶದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಉತ್ತರ ನೀಡಿದರು.
ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲಿಗೆ ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಆರಂಭದಲ್ಲಿ ಭಾರತದ ಬೌಲಿಂಗ್ ಪಡೆ ಬಾಂಗ್ಲಾದೇಶದ ವಿರುದ್ಧ ಅದ್ಭುತವಾದ ಮೇಲುಗೈ ಸಾಧಿಸಿತು. ಆದರೆ ಮಧ್ತಮ ಓವರ್‌ಗಳಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದೆ. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ 80 ರನ್‌ಗಳಿಸಿ ಬಾಂಗ್ಲಾದೇಶ ತಂಡಕ್ಕೆ ಆಸರೆಯಾದರೆ ತೌಹಿದ್ ಹೃದೋಯ್ ಅವರಿಗೆ ಅದ್ಭುತ ಸಾಧ್ ನಿಡಿ ಅರ್ಧ ಶತಕ ಸಿಡಿಸಿದರು. ಇನ್ನು ಕೆಳ ಕ್ರಮಾಂಕದ ಆಟಗಾರ ನಸುನ್ ಅಹ್ಮದ್ ಕೂಡ 44 ರನ್‌ಗಳ ಕೊಡುಗೆ ನೀಡಿದ ಕಾರಣ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್‌ಗಳನ್ನು ಕಲೆಹಾಕಿತ್ತು.
ಇದನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತವುಂಟಾಯಿತು. ತಂಡದ ಪರವಾಗಿ ಶುಬ್ಮನ್ ಗಿಲ್ ಅಮೋಘ ಶತಕ ಸಿಡಿಸಿ ಹೋರಾಟ ನಡೆಸಿದರು. ಅಕ್ಷರ್ ಪಟೇಲ್ ಕೂಡ ಅಂತಿಮ ಹಂತದವರೆಗೂ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಇತರ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬಾರದ ಕಾರಣ ಟೀಮ್ ಇಂಡಿಯಾ 6 ರನ್‌ಗಳ ಅಂತರದಿಂದ ಸೋಲು ಅನುಭವಿಸುವಂತಾಯುಯಿತು.