ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ ನವದೆಹಲಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ ಕಲೆ ಹಾಕಿದೆ. ಈ ವೇಳೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮೊದಲ ದಿನ ಅಬ್ಬರಿಸಿದ್ದರೆ, ನಾಯಕ ಶುಭಮನ್ ಗಿಲ್ ಎರಡನೇ ದಿನದಾಟದಲ್ಲಿ ಆರ್ಭಟಿಸಿದರು. ಅಲ್ಲದೆ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದರು.
ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶುಭಮನ್ ಗಿಲ್ ಅಜೇಯ 129 ರನ್‌ಗಳ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾದರು. ಈ ಮೂಲಕ ಗಿಲ್ ತಮ್ಮ ಹೆಸರಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಶುಭಮನ್ ಗಿಲ್ ಆ ಒಂದು ವಿಷಯದಲ್ಲಿ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ. ಆ ದಾಖಲೆ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ.

ನಾಯಕತ್ವ ವಹಿಸಿಕೊಂಡ ಬಳಿಕ ಶುಭಮನ್ ಗಿಲ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಶುಭಮನ್ ಗಿಲ್ ಅವರಿಗೆ ದೆಹಲಿಯ ಟೆಸ್ಟ್ ನಾಯಕನಾಗಿ 12ನೇ ಇನಿಂಗ್ಸ್ ಆಗಿದೆ. ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಗಿಲ್, ನಾಯಕನಾಗಿ ಐದು ಟೆಸ್ಟ್ ಶತಕಗಳನ್ನು ವೇಗವಾಗಿ ಪೂರೈಸಿದ ಮೂರನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಲಿಸ್ಟರ್ ಕುಕ್ ಮೊದಲ ಸ್ಥಾನದಲ್ಲಿದ್ದಾರೆ.
ಅಲಸ್ಟೈರ್ ಕುಕ್ (ಇಂಗ್ಲೆಂಡ್) - 9 ಇನ್ನಿಂಗ್ಸ್
ಸುನಿಲ್ ಗವಾಸ್ಕರ್ (ಭಾರತ) - 10 ಇನ್ನಿಂಗ್ಸ್
ಶುಬ್‌ಮನ್ ಗಿಲ್ (ಭಾರತ) - 12 ಇನ್ನಿಂಗ್ಸ್
ಡಾನ್ ಬ್ರಾಡ್‌ಮನ್ (ಆಸ್ಟ್ರೇಲಿಯಾ) - 13 ಇನ್ನಿಂಗ್ಸ್
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) - 13 ಇನ್ನಿಂಗ್ಸ್
ಈ ಶತಕದ ಮೂಲಕ ಶುಭಮನ್ ಗಿಲ್ ಮತ್ತೊಂದು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ನಾಯಕನಾಗಿ ಒಂದೇ ವರ್ಷದಲ್ಲಿ ಸಿಡಿಸಿದ 5ನೇ ಶತಕವಾಗಿದೆ. ವಿರಾಟ್ ಕೊಹ್ಲಿ ಈ ದಾಖಲೆಯನ್ನು 2017, 2018ರಲ್ಲಿ ಎರಡು ಬಾರಿ ಮಾಡಿದ್ದಾರೆ. ಇನ್ನು ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ 1997ರಲ್ಲಿ ಒಂದೇ ವರ್ಷದಲ್ಲಿ 4 ಶತಕ ಬಾರಿಸಿದ್ದರು.
ಟೀಮ್ ಇಂಡಿಯಾದ ನಾಯಕನಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಮೊದಲ ಸ್ಥಾನದಲ್ಲಿದ್ದಾರೆ.
ಜೋ ರೂಟ್ (ಇಂಗ್ಲೆಂಡ್), 8
ದಿಮುತ್ತು ಕರುಣರತ್ನೆ (ಶ್ರೀಲಂಕಾ), 6
ಶುಭಮನ್ ಗಿಲ್ (ಭಾರತ), 5
ರೋಹಿತ್ ಶರ್ಮಾ (ಭಾರತ), ಬಾಬರ್ ಅಜಮ್ (ಪಾಕಿಸ್ತಾನ), 4