ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಇಬ್ಬರೂ ಆಟಗಾರರು ತಮ್ಮ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿ ಇದ್ದಾರೆ. ಹೀಗಿರುವಾಗ ಟೀಮ್ ಇಂಡಿಯಾದ ಮುಂದಿನ ಭವಿಷ್ಯದ ಆಟಗಾರ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಪ್ರಶ್ನೆಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಉತ್ತರವನ್ನು ನೀಡಿದ್ದಾರೆ.
ರವಿ ಶಾಸ್ತ್ರಿ ಫ್ಯೂಚರ್ ಪೋಸ್ಟರ್ ಬಾಯ್ ಹೆಸರನ್ನು ರಿವೀಲ್ ಮಾಡಿದ್ದಾರೆ. ರವಿ ಶಾಸ್ತ್ರಿ ಅವರ ಪ್ರಕಾರ ಭವಿಷ್ಯದ ಸ್ಟಾರ್ ಆಟಗಾರ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಏಷ್ಯಾಕಪ್‌ನಲ್ಲಿ ತಮ್ಮ ಛಾಪು ಮೂಡಿಸಲಿದ್ದಾರೆ. ಇಷ್ಟು ಹೇಳಿದ ಮೇಲೆ ಆ ಆಟಗಾರ ಯಾರು ಎಂಬ ಲೆಕ್ಕಾಚಾರ ನಿಮ್ಮ ಮನಸ್ಸಿನಲ್ಲಿ ಬಾರದೇ ಇರದು. ಎಸ್ ನಿಮ್ಮ ಊಹೆ ಸರಿಯಾಗಿದೆ ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ರವಿ ಶಾಸ್ತ್ರಿ ಶುಭಮನ್ ಗಿಲ್ ಅವರನ್ನು ಕರೆದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರವಿಶಾಸ್ತ್ರಿ ಶುಭಮನ್ ಗಿಲ್ ಟೀಮ್ ಇಂಡಿಯಾದ ನ್ಯೂ ಪೋಸ್ಟರ್ ಬಾಯ್ ಎಂದು ಹೇಳಿದ್ದಾರೆ. ಈ ಹೇಳಿಕೆ ಶುಭಮನ್ ಗಿಲ್ ಅವರ ಬ್ರ್ಯಾಂಡ್ ಮೌಲ್ಯ ಮತ್ತು ಬ್ಯಾಟಿಂಗ್‌ನ ಹೊರೆ ಅವರ ಮೇಲೆ ಇರಲಿದೆ ಎಂಬುದನ್ನು ಸೂಚಿಸಲಿದೆ. ಗಿಲ್ ಟೀಮ್ ಇಂಡಿಯಾದ ಪರ ಮೂರು ಸ್ವರೂಪದಲ್ಲಿ ಆಡಿ ಸೈ ಎನಿಸಿಕೊಂಡದ್ದಾರೆ. ಅವರು ಉತ್ತಮ ಆಟಗಾರ. ಅಲ್ಲದೆ ಮಾಜಿ ಆಟಗಾರರು ಸಹ ಗಿಲ್ ಬ್ಯಾಟಿಂಗ್ ಕೊಂಡಾಡಿದ್ದು, ಇವರೇ ಭವಿಷ್ಯದ ಆಟಗಾರ ಎಂದು ರವಿ ಶಾಸ್ತ್ರಿ ಕರೆದಿದ್ದಾರೆ.
ಟೀಮ್ ಇಂಡಿಯಾದ ರೋಹಿತ್ ಶರ್ಮಾ ಅವರ ನಿವೃತ್ತಿಯಾದ ಬಳಿಕ ನಾಯಕತ್ವವನ್ನು ನಿಭಾಯಿಸಿದ್ದು ಶುಭಮನ್ ಗಿಲ್. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಈ ಸರಣಿಯಲ್ಲಿ ಅವರು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ದಾಖಲೆಗಳ ದಾಖಲೆ ಬರೆದರು. ಈ ಸರಣಿಯಲ್ಲಿ ಇವರು ಆಡಿದ 10 ಇನ್ನಿಂಗ್ಸ್‌ಗಳಲ್ಲಿ 75.40 ಸರಾಸರಿಯಲ್ಲಿ 754 ರನ್ ಗಳಿಸಿದರು. ಇದರಲ್ಲಿ 4 ಶತಕಗಳು ಸೇರಿವೆ. ಅಲ್ಲದೆ ಗಿಲ್ ಟೀಮ್ ಇಂಡಿಯಾದ ಪರ ನಾಯಕರಾಗಿ ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಕೀರ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಶುಭಮನ್ ಗಿಲ್ ಅವರಿಗೆ ಈಗ 25 ವರ್ಷ. ಅವರು ಇನ್ನು ಸುಮಾರು 10 ವರ್ಷ ಭಾರತ ತಂಡವನ್ನು ಪ್ರತಿನಿಧಿಸಬಹುದಾಗಿದೆ. ಇವರನ್ನು ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ ಎಂದೇ ಕರೆಯುತ್ತಾರೆ. ಇಲ್ಲಿಯ ವರೆಗೆ ಶುಭಮನ್ ಗಿಲ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ಮುಂದಿನ ದಿನಗಳು ಶುಭಮನ್ ಗಿಲ್ ಅವರಿಗೆ ಸವಾಲಿನದ್ದಾಗಿರಲಿದೆ. ಈ ಮೆಟ್ಟಿಲುಗಳನ್ನು ಗಿಲ್ ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.