ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಸವಾಲಿನ ಗುರಿಯಾಗಿರುವ 608 ರನ್‌ಗಳ ಗುರಿಯನ್ನು ನೀಡಿದೆ. ಈ ಪಂದ್ಯವನ್ನು ಶುಭಮನ್ ಗಿಲ್ ಪಡೆ ಗೆಲುವಿನ ಕನಸು ಕಾಣುತ್ತಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದ ನಾಯಕ ಶುಭಮನ್ ಗಿಲ್, ಎರಡನೇ ಇನಿಂಗ್ಸ್‌ನಲ್ಲೂ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಈ ಪಂದ್ಯದಲ್ಲಿ ಗಿಲ್ ತಮ್ಮ ನೈಜ್ಯ ಆಟವನ್ನು ಆಡಿ ಮೂರಂಕಿ ದಾಟಿ ಸಂಭ್ರಮಿಸಿದರು. ಇವರು ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿ 162 ಎಸೆತಗಳಲ್ಲಿ 13 ಬೌಂಡರಿ, 8 ಸಿಕ್ಸರ್ ಸಹಾಯದಿಂದ 161 ರನ್ ಬಾರಿಸಿದರು.

ಶನಿವಾರ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗೆ 64 ರನ್‌ಗಳಿಂದ ಆಟ ಮುಂದುವರೆಸಿತು. ಈ ವೇಳೆ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 427 ರನ್ ಕಲೆ ಹಾಕಿ ಮುನ್ನುಗುತ್ತಿದ್ದಾಗ, ನಾಯಕ ಶುಭಮನ್ ಗಿಲ್ ಡಿಕ್ಲೇರ್ ಮಾಡಿಕೊಂಡರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 180 ರನ್ ಮುನ್ನಡೆ ಸಾಧಿಸಿತ್ತು. ಹೀಗಾಗಿ ಇಂಗ್ಲೆಂಡ್ ಗೆಲುವಿಗೆ 608 ರನ್‌ಗಳ ಗುರಿಯನ್ನು ನೀಡಲಾಯಿತು.
ಕರುಣ್ ನಾಯರ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳವಲ್ಲಿ ವಿಫಲರಾದರು. ಇವರು 26 ರನ್ ಇನಿಂಗ್ಸ್ ಕಟ್ಟಿದರೂ ಸಹ ಈ ಇನಿಂಗ್ಸ್ ದೊಡ್ಡದಾಗಿ ಕನ್ವರ್ಟ್ ಮಾಡಿಕೊಳ್ಳುವಲ್ಲಿ ವಿಫಲರಾದರು. ಟೀಮ್ ಇಂಡಿಯಾದ ಆರಂಭಿಕ ಕೆಎಲ್ ರಾಹುಲ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮತ್ತೊಮ್ಮೆ ಪ್ರದರ್ಶಿಸಿದರು. ಇವರು 10 ಬೌಂಡರಿ ನೆರವಿನಿಂದ 55 ರನ್ ಸೇರಿಸಿ ತಂಡಕ್ಕೆ ನೆರವಾದರು.

ನಾಲ್ಕನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಜೋಡಿ ತಂಡಕ್ಕೆ ಆಧಾರವಾದರು. ಈ ಜೊಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 103 ಎಸೆತಗಳಲ್ಲಿ 110 ರನ್ ಸೇರಿಸಿತು. ಈ ಜೊತೆಯಾಟದಲ್ಲಿ ರಿಷಭ್ ಪಂತ್ ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿದರು. ಇವರು 58 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 65 ರನ್ ಬಾರಿಸಿ ಔಟ್ ಆದರು. ಮೊದಲ ಇನಿಂಗ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಎರಡನೇ ಇನಿಂಗ್ಸ್‌ನಲ್ಲೂ ಅಬ್ಬರಿಸಿದರು. ಇವರು ಅಜೇಯ 69 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಗಿಲ್ ಹಾಗೂ ಜಡೇಜಾ ಜೋಡಿ 208 ಎಸೆತಗಳಲ್ಲಿ 175 ರನ್ ಸಿಡಿಸಿದರು.

ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಎರಡನೇ ಇನಿಂಗ್ಸ್‌ನಲ್ಲೂ ಅಬ್ಬರಿಸಿದರು. ಇವರು 162 ಎಸೆತಗಳಲ್ಲಿ 13 ಬೌಂಡರಿ, 8 ಸಿಕ್ಸರ್ ಸಹಾಯದಿಂದ 161 ರನ್ ಸಿಡಿಸಿದರು.
ಟೀಮ್ ಇಂಡಿಯಾದ ನಾಯಕ ಗಿಲ್ ಈ ಅಮೋಘ ಇನಿಂಗ್ಸ್ ಮೂಲಕ ಹಲವು ದಾಖಲೆ ಮುರಿದಿದ್ದಾರೆ. ಭಾರತದ ಪರ ಒಂದೇ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೂಲಕ ಗಿಲ್ 1971ರಲ್ಲಿ ಸುನಿಲ್ ಗವಾಸ್ಕರ್ (344 ರನ್) ವೆಸ್ಟ್ ಇಂಡೀಸ್ ವಿರುದ್ಧದ ದಾಖಲೆ ಅಳಿಸಿದರು.