ಸೋಮವಾರ, ನವೆಂಬರ್ 27ರಂದು ನಡೆದ 2023ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಪ್ರಾದೇಶಿಕ ಕ್ವಾಲಿಫೈಯರ್ ಪಂದ್ಯದಲ್ಲಿ ರುವಾಂಡಾ ತಂಡದ ವಿರುದ್ಧ ಜಿಂಬಾಬ್ವೆ 144 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಇದೇ ವೇಳೆ, ಅನುಭವಿ ಕ್ರಿಕೆಟಿಗ ಸಿಕಂದರ್ ರಝಾ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಜಿಂಬಾಬ್ವೆಯ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ರುವಾಂಡಾ ತಂಡದ ಆಲ್‌ರೌಂಡರ್ ಮುಹಮ್ಮದ್ ನಾದಿರ್, ಜಪ್ಪಿ ಬಿಮೆನಿಮಾನಾ ಮತ್ತು ಎಮಿಲಿ ರುಕಿರಿಜಾ ಅವರ ಸತತ ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ಸಿಕಂದರ್ ರಝಾ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅವರ ಅದ್ಭುತ ಪ್ರದರ್ಶನದ ಕಾರಣದಿಂದ, ಜಿಂಬಾಬ್ವೆ ರುವಾಂಡಾ ವಿರುದ್ಧದ ಅರ್ಹತಾ ಪಂದ್ಯವನ್ನು 144 ರನ್‌ಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಮೂಲಕ 2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ತಮ್ಮ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡಕ್ಕೆ ಸಿಕಂದರ್ ರಾಝಾ ಮತ್ತು ತಡಿವಾನಾಶೆ ಮರುಮಣಿ ಪರಿಪೂರ್ಣ ಆರಂಭ ನೀಡಿದರು. ನಂತರ ರಿಯಾನ್ ಬರ್ಲ್ ಅವರ 44 ರನ್‌ಗಳ ನೆರವಿನಿಂದ ಸ್ಕೋರ್ ಬೋರ್ಡ್‌ನಲ್ಲಿ 215 ರನ್ ಗಳಿಸಿತು. ಚೇಸ್ ವೇಳೆ, ರುವಾಂಡಾ ರನ್ ಬೆನ್ನಟ್ಟಲು ಹೆಣಗಾಡಿತು.
ರಿಚರ್ಡ್ ನಗರವ ಹೊಸ ಚೆಂಡಿನೊಂದಿಗೆ ಅತ್ಯುತ್ತಮ ದಾಳಿ ನಡೆಸಿದರು. ಆದರೆ ಸಿಕಂದರ್ ರಝಾ ಅಂತಿಮ ಮೂರು ವಿಕೆಟ್‌ಗಳನ್ನು ಪಡೆದು ಜಿಂಬಾಬ್ವೆ ತಂಡಕ್ಕೆ ನಿರ್ಣಾಯಕ ಗೆಲುವು ತಂದುಕೊಟ್ಟರು.
ಜಿಂಬಾಬ್ವೆ ಪ್ರಸ್ತುತ 2024 ಟಿ20 ವಿಶ್ವಕಪ್ ಅರ್ಹತಾ ಅಂಕಪಟ್ಟಿಯಲ್ಲಿ ನಮೀಬಿಯಾ, ಉಗಾಂಡಾ ಮತ್ತು ಕೀನ್ಯಾ ನಂತರ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ, ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ಮುಂದಿನ ವರ್ಷ ನಡೆಯುವ ಐಸಿಸಿ ಪಂದ್ಯಾವಳಿಗೆ ಅರ್ಹತೆ ಪಡೆಯಲು ಅಸಾಮಾನ್ಯವಾದ ಏನಾದರೂ ಮಾಡುವ ಅಗತ್ಯವಿದೆ.

2022ರಲ್ಲಿ ಬ್ಯಾಟ್ ಮತ್ತು ಬೌಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಬಳಿಕ, ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಝಾ ಅವರನ್ನು 2023ರ ಐಪಿಎಲ್‌ಗಾಗಿ ಪಂಜಾಬ್ ಕಿಂಗ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಪಂಜಾಬ್ ಕಿಂಗ್ಸ್ ಫ್ರಾಂಚೈಸ್ ಸಿಕಂದರ್ ಅವರನ್ನು ಮೂಲ ಬೆಲೆಗೆ ತೆಗೆದುಕೊಂಡಿತು. ಆದರೆ ಆಲ್‌ರೌಂಡರ್ ತನ್ನನ್ನು ತಾನು ಸಾಬೀತುಪಡಿಸಲು ವಿಫಲರಾದರು.
ಸಿಕಂದರ್ ರಝಾ ಆಡಿದ ಏಳು ಪಂದ್ಯಗಳಲ್ಲಿ 119 ರನ್ ಗಳಿಸುವಲ್ಲಿ ಯಶಸ್ವಿಯಾದರು ಮತ್ತು ಕೇವಲ ಮೂರು ವಿಕೆಟ್‌ಗಳನ್ನು ಪಡೆದರು. ಆರಂಭಿಕ ಪಂದ್ಯಗಳಲ್ಲಿ ಜಾನಿ ಬೈರ್‌ಸ್ಟೋವ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅನುಪಸ್ಥಿತಿಯಲ್ಲಿ, ಸಿಕಂದರ್ ರಝಾ ಅವರಿಗೆ ಅವಕಾಶವನ್ನು ನೀಡಲಾಯಿತು. ಆದರೆ, ಅದರ ಲಾಭ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಹೀಗಿದ್ದರೂ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಜಿಂಬಾಬ್ವೆ ಕ್ರಿಕೆಟಿಗನ ಅಂತಾರಾಷ್ಟ್ರೀಯ ಪ್ರದರ್ಶನ ಗಮನಿಸಿ ಮುಂದಿನ ಋತುವಿಗಾಗಿ ಉಳಿಸಿಕೊಂಡಿದೆ. ತಂಡದ ಸಂಯೋಜನೆಯಲ್ಲಿ ಕೆಲವು ಬದಲಾವಣೆಗಳ ಕುರಿತು ಮಾತುಕತೆಗಳು ನಡೆದವು. ಆದರೆ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಸಿಕಂದರ್ ರಝಾ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿತು.
ಪಂಜಾಬ್ ಕಿಂಗ್ಸ್ ಉಳಿಸಿಕೊಂಡ ಕೇವಲ ಒಂದು ದಿನದ ನಂತರ, ಸಿಕಂದರ್ ರಝಾ ಅವರು ಹ್ಯಾಟ್ರಿಕ್ ವಿಕೆಟ್ ಪಡೆದರು ಮತ್ತು ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಕೆಲವು ನಿರ್ಣಾಯಕ ರನ್‌ಗಳನ್ನು ಗಳಿಸಿದರು.
ಟಿ20 ವಿಶ್ವಕಪ್‌ಗೆ ಜಿಂಬಾಬ್ವೆ ಅರ್ಹತೆ ಪಡೆಯಲು ಮತ್ತು ಮುಂದಿನ ವರ್ಷ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಆಡುವ 11ರ ಬಳಗದಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಅವರು ತಮ್ಮ ಅದ್ಭುತ ಫಾರ್ಮ್ ಮುಂದುವರಿಸಬೇಕಾಗಿದೆ.