2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಮತ್ತು 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯಗಳ ನಡುವಿನ ಕೆಲವು ವಿಲಕ್ಷಣ ಸಾಮ್ಯತೆಗಳು ಕ್ರಿಕೆಟ್ ಲೋಕವನ್ನು ದಿಗ್ಭ್ರಮೆಗೊಳಿಸುವಲ್ಲಿ ಯಶಸ್ವಿಯಾಗಿವೆ.
ಭಾನುವಾರ, ಮೇ 26ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಏಕಪಕ್ಷೀಯವಾಗಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ನಂತರ, ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಈ ವರ್ಷದ ಆರಂಭದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಬಳಿಕ ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡವನ್ನು ಕೆಕೆಆರ್ ಬೌಲರ್‌ಗಳು 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಮಾಡಿದರು. ಇದು ಐಪಿಎಲ್ 2024ರ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಇದೇ ವೇಳೆ, ಇದಕ್ಕೂ ಮುನ್ನ 2024ರ ಡಬ್ಲ್ಯುಪಿಎಲ್‌ನಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡವು ಮಾರ್ಚ್ 17ರಂದು 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವನ್ನು ಆಲೌಟ್ ಮಾಡಿತ್ತು.

2024ರ ಡಬ್ಲ್ಯುಪಿಎಲ್‌ನಲ್ಲಿ ಭಾರತೀಯ ನಾಯಕತ್ವದ ತಂಡ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿದರೆ, 2024ರ ಐಪಿಎಲ್‌ನಲ್ಲಿ ಭಾರತೀಯ ನಾಯಕತ್ವದ ತಂಡ ಕೂಡ 8 ವಿಕೆಟ್‌ಗಳಿಂದ ದಿಗ್ವಿಜಯ ಸಾಧಿಸಿತು.
ಇದು ಎರಡು ಫೈನಲ್ ಪಂದ್ಯಗಳ ನಡುವಿನ ಕೆಲವು ಸಾಮ್ಯತೆಗಳಲ್ಲಿ ಒಂದಾಗಿದೆ. ಕುತೂಹಲಕಾರಿಯಾಗಿ, ಸನ್ ರೈಸರ್ಸ್ ಹೈದರಾಬಾದ್ ಪುರುಷ ತಂಡ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದಲ್ಲಿ ಸೋತ ಎರಡು ತಂಡಗಳು ಪುರುಷರ ಮತ್ತು ಮಹಿಳಾ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ನಾಯಕರನ್ನು ತಮ್ಮ ನಾಯಕರನ್ನಾಗಿ ಹೊಂದಿದ್ದವು ಎಂಬುದು ಗಮನಾರ್ಹ ಸಂಗತಿ.
ಹೆಚ್ಚುವರಿಯಾಗಿ, ಪ್ರಮುಖ ಐಸಿಸಿ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ ಹಿನ್ನೆಲೆಯಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತು ಮೆಗ್ ಲ್ಯಾನಿಂಗ್ ಇಬ್ಬರೂ ತಮ್ಮ ತಮ್ಮ ಲೀಗ್ ಪಂದ್ಯಾವಳಿಗೆ ಕಾಲಿಟ್ಟರು.

ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ ಪುರುಷರ ತಂಡವನ್ನು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಗೆಲುವಿನತ್ತ ಮುನ್ನಡೆಸಿದರು. ನಂತರ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಗೆಲುವು ಸಾಧಿಸಿದರು.
ಇದೇ ವೇಳೆ, ಮೆಗ್ ಲ್ಯಾನಿಂಗ್ ಅವರು ಆಸ್ಟ್ರೇಲಿಯಾದ ಮಹಿಳಾ ತಂಡವನ್ನು 2022ರ ಟಿ20 ಮಹಿಳಾ ವಿಶ್ವಕಪ್ ಫೈನಲ್ ಪ್ರಶಸ್ತಿಗೆ ಭಾರತೀಯ ಮಹಿಳಾ ತಂಡವನ್ನು ಸೋಲಿಸಿದ ನಂತರ ಮುನ್ನಡೆಸಿದರು.
ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂದುಕೊಂಡ ರೀತಿಯಲ್ಲಿ ಪ್ರದರ್ಶನ ನೀಡಲಿಲ್ಲ. ಐಪಿಎಲ್ 2024 ಅತಿ ಕಡಿಮೆ ಮೊತ್ತ ದಾಖಲಿಸಿ ಆಲೌಟ್ ಆದರು.

ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಪವರ್‌ಪ್ಲೇ ಒಳಗೆ ತಲಾ ಮೂರು ಓವರ್‌ಗಳನ್ನು ಬೌಲ್ ಮಾಡಿದರು ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ಮೂರು ವಿಕೆಟ್‌ಗಳನ್ನು ಪಡೆದರು.
ಆರೆಂಜ್ ಆರ್ಮಿ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಕೆಕೆಆರ್ ಪರ ಬೌಲರ್‌ಗಳಲ್ಲಿ ಆಂಡ್ರೆ ರಸೆಲ್ ಮೂರು-ವಿಕೆಟ್‌ಗಳನ್ನು ಪಡೆದರೆ, ಮಿಚೆಲ್ ಸ್ಟಾರ್ಕ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು.
ಪ್ರತ್ಯುತ್ತರವಾಗಿ, ಫಾರ್ಮ್‌ನಲ್ಲಿದ್ದ ಸುನಿಲ್ ನರೈನ್ ಬೇಗನೆ ಔಟಾದರೆ, ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ ಅಜೇಯ 52 ರನ್ ಮತ್ತು ರಹಮಾನುಲ್ಲಾ ಗುರ್ಬಾಜ್ 32 ಎಸೆತಗಳಲ್ಲಿ 39 ರನ್ ಗಳಿಸಿ 45 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನಿರ್ಮಿಸಿ ಅಲ್ಪ ಗುರಿಯ ಸಮೀಪಕ್ಕೆ ಕೊಂಡೊಯ್ದರು.
ರಹಮಾನುಲ್ಲಾ ಗುರ್ಬಾಜ್ ಔಟಾದ ಬಳಿಕ, ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಜೋಡಿ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಕೆಕೆಆರ್ ಎಂಟು ವಿಕೆಟ್ ಹಾಗೂ 57 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಫೈನಲ್ ಪಂದ್ಯ ಗೆದ್ದಿತು.