ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲೇ ಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ದೊಡ್ಡ ದಾಖಲೆಯನ್ನು ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ. ಶುಭಮನ್ ಗಿಲ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ವೇಳೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಹ ದೊಡ್ಡ ರೆಕಾರ್ಡ್ ಮೇಲೆ ದೃಷ್ಟಿ ನೆಟ್ಟಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್, ಈ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರ ಮೇಲೆ ಕಣ್ಣು ನೆಟ್ಟಿದ್ದಾರೆ. ಟೀಮ್ ಇಂಡಿಯಾದ ಪರ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಇಶಾಂತ್ ಶರ್ಮಾ ಅವರ ಹೆಸರಿನಲ್ಲಿದೆ. ಇಶಾಂತ್ ಶರ್ಮಾ 2011 ರಿಂದ 2021ರ ವರೆಗೆ ಒಟ್ಟು 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 51 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಾದ ಬಳಿಕ ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇದ್ದಾರೆ.

ಜಸ್ಪ್ರೀತ್ ಬುಮ್ರಾ ಒಟ್ಟಾರೆ ಇಂಗ್ಲೆಂಡ್ ವಿರುದ್ಧ 11 ಪಂದ್ಯಗಳಲ್ಲಿ 49 ವಿಕೆಟ್ ಪಡೆದಿದ್ದಾರೆ. ಈ ಸರಣಿಯಲ್ಲಿ ಬುಮ್ರಾ ಇನ್ನು ಒಂದು ಪಂದ್ಯವನ್ನು ಆಡಬಹುದಾಗಿದೆ. ಈ ಒಂದು ಪಂದ್ಯದಲ್ಲಿ ಇವರು ಮೂರು ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಇವರು ಇಶಾಂತ್ ಶರ್ಮಾ ಅವರ ದಾಖಲೆಯನ್ನು ಅಳಿಸಿ ಹಾಕಬಲ್ಲರು. ಟೀಮ್ ಇಂಡಿಯಾದ ಮಾರಕ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಅನಿಲ್ ಕುಂಬ್ಳೆ ಇಂಗ್ಲೆಂಡ್ ನೆಲದಲ್ಲಿ ಸದ್ಯ ಸಮ ವಿಕೆಟ್‌ಗಳನ್ನು ಪಡೆದಿದ್ದಾರೆ.
ಮ್ಯಾಚೆಂಸ್ಟರ್‌ನಲ್ಲಿ ನಡೆಯುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಇನ್ನೊಂದು ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಅಳಿಸಿ ಹಾಕಬಲ್ಲರು. ಸಿರಾಜ್ 9 ಟೆಸ್ಟ್ ಪಂದ್ಯಗಳಲ್ಲಿ 36 ವಿಕೆಟ್ ಕಬಳಿಸಿದ್ದಾರೆ. ಇನ್ನು ಕುಂಬ್ಳೆ ಸಹ 1990 ರಿಂದ 2007ರ ವರೆಗೆ ಆಡಿದ 10 ಪಂದ್ಯಗಳಲ್ಲಿ 36 ವಿಕೆಟ್ ಹೊಂದಿದ್ದಾರೆ. ಸಿರಾಜ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಕುಂಬ್ಳೆ ಸಾಧನೆ ಹಿಂದಿಕ್ಕಬಹುದು.

ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಕಪಿಲ್ ದೇವ್ ಹಾಗೂ ಮೊಹಮ್ಮದ್ ಶಮಿ ಸಹ ಸ್ಥಾನ ಪಡೆದಿದ್ದಾರೆ. ಕಪಿಲ್ ದೇವ್ ಇಂಗ್ಲೆಂಡ್ ವಿರುದ್ಧ 43 ವಿಕೆಟ್ ಕಬಳಿಸಿದರೆ, ಶಮಿ 42 ವಿಕೆಟ್ ಪಡೆದಿದ್ದಾರೆ.
ಮೊಹಮ್ಮದ್ ಸಿರಾಜ್ ಭಾರತದ ಪರ ಒಟ್ಟಾರೆ 39 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 113 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಇವರು 6 ಬಾರಿ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದರೆ, 4 ಬಾರಿ ಐದು ವಿಕೆಟ್ ಪಡೆದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.