ಸ್ಮೃತಿ ಶತಕ, ನ್ಯೂಜಿಲ್ಯಾಂಡ್ ವಿರುದ್ಧ ಭಾರತದ ಮಹಿಳೆಯರಿಗೆ 9 ವಿಕೆಟ್ ಜಯ

ನೇಪಿಯರ್, ಜನವರಿ 24: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತದ ಮಹಿಳಾ ತಂಡ ನೇಪಿಯರ್‌ನ ಮೆಕ್‌ಲೀನ್ ಪಾರ್ಕ್ ಸ್ಟೇಡಿಯಂನಲ್ಲಿ ಗುರುವಾರ (ಜನವರಿ 24) ನಡೆದ ನ್ಯೂಜಿಲ್ಯಾಂಡ್-ಭಾರತ ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವನ್ನಾಚರಿಸಿದೆ. ಸ್ಮೃತಿ ಮಂಧಾನ ಶತಕ, ಜೆಮಿಮಾ ರೋಡ್ರಿಗಸ್ ಅರ್ಧಶತಕದಿಂದ ತಂಡ ಸುಲಭ ಜಯ ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ಮಹಿಳಾ ತಂಡ, ಸುಝೀ ಬೇಟ್ಸ್ 36, ನಾಯಕಿ ಆಮಿ ಸಟ್ಟರ್ವೈಟ್ 31, ಸೋಫಿ ಡೆವೈನ್ ಮತ್ತು ಅಮೆಲಿಯಾ ಕೆರ್ 28 ರನ್ ಕೊಡುಗೆಯೊಂದಿಗೆ 48.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 192 ರನ್ ಕಲೆ ಹಾಕಿತು.
ಕಿವೀಸ್ ಇನ್ನಿಂಗ್ಸ್ ವೇಳೆ ಭಾರತದ ಎಕ್ತಾ ಬಿಶ್ತ್ ಮತ್ತು ಪೂನಂ ಯಾದವ್ ತಲಾ 3, ದೀಪ್ತೀ ಶರ್ಮಾ 2 ವಿಕೆಟ್ ಕೆಡವಿ ಎದುರಾಳಿಯನ್ನು ಕಟ್ಟಿ ಹಾಕಿದರು. ಭಾರತದ ಇನ್ನಿಂಗ್ಸ್ ವೇಳೆ ಸ್ಮೃತಿ 105, ಜಮಿಮಾ ಅಜೇಯ 81 ಬಾರಿಸಿದ್ದರಿಂದ ತಂಡ 33 ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 193 ರನ್ ಬಾರಿಸಿತು.
104 ಎಸೆತಗಳಿಗೆ 105 ರನ್ ಸಿಡಿಸಿದ ಭಾರತದ ಸ್ಮೃತಿ ಮಂಧಾನ ಪಂದ್ಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರು. ಐಸಿಸಿ ಚಾಂಪಿಯನ್‌ಶಿಪ್ ಪಂದ್ಯವೂ ಆಗಿದ್ದ ಇದರಲ್ಲಿ ಜಯಿಸುವುದರೊಂದಿಗೆ ಭಾರತ 3 ಪಂದ್ಯಗಳ ಏಕದಿನ ಸರಣಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪುರುಷರ, ಮಹಿಳೆಯರ ತಂಡ ಸುಲಭ ಜಯ ಸಾಧಿಸಿದ್ದು ವಿಶೇಷ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications