ಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ 2000 ರನ್ ದಾಖಲಿಸಿದ ಸ್ಮೃತಿ

ಅಂಟಿಗಾ, ನವೆಂಬರ್ 07: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತದ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ಗುರುವಾರದಂದು ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ತ್ವರಿತ ಗತಿಯಲ್ಲಿ 2000 ರನ್ ದಾಖಲಿಸಿದ ಭಾರತೀಯ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ತ್ವರಿತವಾಗಿ 2000 ರನ್ ಗಳಿಸಿದ ಆಟಗಾರರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಸ್ಮೃತಿ ಹಿಂದಿಕ್ಕಿರುವುದು ವಿಶೇಷ. ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಸ್ಮೃತಿ ಸಾಧನೆ: 23 ವರ್ಷ ವಯಸ್ಸಿನ ಮಂಧಾನ 51 ಇನ್ನಿಂಗ್ಸ್ ನಲ್ಲಿ 43.08 ರನ್ ಸರಾಸರಿಯಂತೆ 2,025 ರನ್ ಗಳಿಸಿದ್ದು, ಒಟ್ಟಾರೆ, 2000ರನ್ ಗಡಿ ದಾಟಿದ ಮಹಿಳಾ ಕ್ರಿಕೆಟರ್ ಗಳ ಪೈಕಿ ಮೂರನೆಯವರಾಗಿದ್ದಾರೆ. ಬೆಲಿಂಡಾ ಕ್ಲಾರ್ಕ್ 41 ಹಾಗೂ ಮೆಗ್ ಲ್ಯಾನ್ನಿಂಗ್ 45 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
ಪುರುಷರ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ 40 ಇನ್ನಿಂಗ್ಸ್ ಗಳಲ್ಲಿ, ಭಾರತದ ಶಿಖರ್ ಧವನ್ 48 ಇನ್ನಿಂಗ್ಸ್ನಲ್ಲಿ 2000 ರನ್ ಗುರಿ ಮುಟ್ಟಿದ್ದಾರೆ. ಭಾರತೀಯ ಕ್ರಿಕೆಟರ್ ಗಳ ಪೈಕಿ ವಿರಾಟ್ ಕೊಹ್ಲಿ 53, ಸೌರವ್ ಗಂಗೂಲಿ 52 ಹಾಗೂ ನವಜ್ಯೋತ್ ಸಿಧು 52 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಈ ಪಂದ್ಯದಲ್ಲಿ ಸ್ಮೃತಿ ಮಂಧಾನ 74 ರನ್ ಬಾರಿಸಿದ್ದಲ್ಲದೆ, ಜೆಮಿಮಾ ರೊಡ್ರಿಗಸ್ ಜತೆಗೂಡಿ ಆರಂಭಿಕ ವಿಕೆಟ್ ಗೆ 141 ರನ್ ಕಲೆಹಾಕಿದರು. ವೆಸ್ಟ್ ಇಂಡೀಸ್ ಮಹಿಳೆಯರು ನೀಡಿದ 195 ರನ್ ಗುರಿಯನ್ನು ಸುಲಭವಾಗಿ ಮುಟ್ಟಿದ ಭಾರತದ ವನಿತೆಯರು ಮೂರನೆ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡರು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಗೆದ್ದು ಸಂಭ್ರಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications