ಭಾರತೀಯ ಮಹಿಳಾ ಕ್ರಿಕೆಟ್‌ನ ತಾರೆ, ಆರ್‌ಸಿಬಿ ತಂಡದ ನಾಯಕಿಯೂ ಆಗಿರುವ ನ್ಯಾಷನಲ್ ಕ್ರಶ್ ಸ್ಮೃತಿ ಮಂಧಾನ ಇಂದು (ಜುಲೈ 18, 2024) 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
2013ರಲ್ಲಿ ತನ್ನ ಚೊಚ್ಚಲ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಮಾಡಿದ ಸ್ಮೃತಿ ಮಂಧಾನ, ತನ್ನ ಅದ್ಭುತ ಬ್ಯಾಟಿಂಗ್ ಶೈಲಿ ಮತ್ತು ಒತ್ತಡದ ಸಂದರ್ಭಗಳಲ್ಲಿ ಪ್ರದರ್ಶನ ನೀಡುವ ಸಾಮರ್ಥ್ಯದಿಂದಾಗಿ ವೇಗವಾಗಿ ಪ್ರಾಮುಖ್ಯತೆಗೆ ಏರಿದರು.

ಸ್ಮೃತಿ ಮಂಧಾನ ತಮ್ಮ 11 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ವೈಯಕ್ತಿಕ ಮತ್ತು ತಂಡದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸ್ಟಾರ್ ಬ್ಯಾಟರ್ 7 ಟೆಸ್ಟ್, 85 ಏಕದಿನ ಮತ್ತು 136 ಟಿ20 ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ 7500ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ.
ತಮ್ಮ ವಿಶೇಷ ಜನ್ಮದಿನದಂದು ಸ್ಮೃತಿ ಮಂಧಾನ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಐದು ಪ್ರಭಾವಶಾಲಿ ಸಾಧನೆಗಳನ್ನು ಗಮನಿಸೋಣ.
ಈ ವರ್ಷದ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವನ್ನು ತಮ್ಮ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಗೆ ಮುನ್ನಡೆಸಿದರು.

ಆರ್‌ಸಿಬಿ, 2008ರಿಂದ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಮತ್ತು ಅಂದಿನಿಂದ ಐಪಿಎಲ್ ಟ್ರೋಫಿಯನ್ನು ತಪ್ಪಿಸಿಕೊಂಡಿದೆ. ಪೇಪರ್‌ನಲ್ಲಿ ಬಲಿಷ್ಠ ತಂಡವಾಗಿ ಕಂಡುಬಂದರೂ, ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. 2023ರಲ್ಲಿ ನಡೆದ ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪುರುಷರ ತಂಡದಂತೆ, ಆರ್‌ಸಿಬಿ ಮಹಿಳಾ ತಂಡವೂ ಸಹ ಅದೇ ದುರಾದೃಷ್ಟವನ್ನು ಅನುಭವಿಸಿತು.
ಗುಂಪು ಹಂತದಲ್ಲಿ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಿಂದ ಚೇತರಿಸಿಕೊಂಡ ಆರ್‌ಸಿಬಿ, ಫೈನಲ್ ಪಂದ್ಯದ ಅವಕಾಶಕ್ಕಾಗಿ ಪ್ಲೇಆಫ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡನ್ನು ಸೋಲಿಸಿತು.
ಫೈನಲ್‌ನಲ್ಲಿ ನಿರ್ಣಾಯಕ 31 ರನ್‌ಗಳ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂಧಾನ, ಆರ್‌ಸಿಬಿ ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಗೆಲುವಿಗೆ ಕಾರಣರಾದರು.

2021ರಲ್ಲಿ ಸ್ಮೃತಿ ಮಂಧಾನರ ಅದ್ಭುತ ಬ್ಯಾಟಿಂಗ್ ಫಾರ್ಮ್ ಎರಡನೇ ಬಾರಿಗೆ ಐಸಿಸಿ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಎಂದು ಕರೆಯಲ್ಪಡುವ ರಾಚೆಲ್ ಹೇಹೋ-ಫ್ಲಿಂಟ್ ಪ್ರಶಸ್ತಿಯನ್ನು ಪಡೆದರು. ಅದಕ್ಕೂ ಮುನ್ನ 2018ರಲ್ಲಿ ಆ ಪ್ರಶಸ್ತಿಯನ್ನು ಗೆದ್ದಿದ್ದರು.
ಸ್ಮೃತಿ ಮಂಧಾನ ಎರಡು ಬಾರಿ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಎಲೈಟ್ ಕ್ಲಬ್‌ನಲ್ಲಿ ಆಸ್ಟ್ರೇಲಿಯಾದ ತಾರೆ ಎಲ್ಲಿಸ್ ಪೆರ್ರಿ ಪಟ್ಟಿಯನ್ನು ಸೇರಿಕೊಂಡರು. ಇತ್ತೀಚೆಗೆ, ಇಂಗ್ಲೆಂಡ್‌ನ ನ್ಯಾಟ್ ಸಿವರ್-ಬ್ರಂಟ್ 2022 ಮತ್ತು 2023ರಲ್ಲಿ ಸತತವಾಗಿ ಪ್ರಶಸ್ತಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೂರನೇ ಮಹಿಳಾ ಕ್ರಿಕೆಟಿಗರಾದರು.
ಆಸೀಸ್‌ನಲ್ಲಿ ಏಕದಿನ, ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್
ಸ್ಮೃತಿ ಮಂಧಾನ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೋಬರ್ಟ್‌ನಲ್ಲಿ 109 ಎಸೆತಗಳಲ್ಲಿ 102 ರನ್ ಸಿಡಿಸುವ ಮೂಲಕ ತಮ್ಮ ಚೊಚ್ಚಲ ಏಕದಿನ ಶತಕ ಬಾರಿಸಿದರು.
ಸುಮಾರು ಐದು ವರ್ಷಗಳ ನಂತರ, ಆಸ್ಟ್ರೇಲಿಯಾದಲ್ಲಿ ನಡೆದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ ಮಂಧಾನ 216 ಎಸೆತಗಳಲ್ಲಿ 127 ರನ್ ಗಳಿಸಿದರು. ಅವರ ಅದ್ಭುತ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು.
2021ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ಸ್ಮೃತಿ ಮಂಧಾನ ಅವರ ಶತಕವು ಆಸ್ಟ್ರೇಲಿಯಾದ ನೆಲದಲ್ಲಿ ಏಕದಿನ ಮತ್ತು ಟೆಸ್ಟ್ ಶತಕವನ್ನು ದಾಖಲಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎನಿಸಿದರು.
ಇತ್ತೀಚಿನ ವರ್ಷಗಳಲ್ಲಿ ಸ್ಮೃತಿ ಮಂಧಾನ ಅವರು ವಿಶ್ವದ ಅತ್ಯಂತ ಸ್ಥಿರ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 2021ರಲ್ಲಿ ಅತ್ಯದ್ಭುತ ಫಾರ್ಮ್‌ನಲ್ಲಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್ ಮಾಡುವಾಗ ಸತತ 10 ಬಾರಿ 50-ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಲಕ್ನೋದಲ್ಲಿ ತನ್ನ 18ನೇ ಅರ್ಧಶತಕ ಬಾರಿಸಿದ ಬಳಿಕ, ಸ್ಮೃತಿ ಮಂಧಾನ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದರು.
ಕಳೆದ ವರ್ಷ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನಲ್ಲಿ ಸ್ಮೃತಿ ಮಂಧಾನ ಭಾರತ ತಂಡವು ಚಿನ್ನದ ಪದಕ ಗೆಲುವಿನ ಸಾಧನೆಗೆ ಕಾರಣರಾಗಿದ್ದರು.
ಸ್ಮೃತಿ ಮಂಧಾನ ಫೈನಲ್‌ನಲ್ಲಿ ನಿರ್ಣಾಯಕ 46 ರನ್‌ಗಳ ಇನ್ನಿಂಗ್ಸ್ ಆಡಿದರು. ಇದು ಭಾರತವು ಮೊದಲು ಬ್ಯಾಟಿಂಗ್ ಮಾಡುವಾಗ 116 ರನ್ ಗಳಿಸಲು ಸಹಾಯ ಮಾಡಿದರು. ಅಂತಿಮವಾಗಿ ಶ್ರೀಲಂಕಾ ಮಹಿಳಾ ತಂಡವನ್ನು 19 ರನ್‌ಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು.