ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಪುರಷರ ತಂಡ, ಆಸೀಸ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದರೆ, ಮಹಿಳಾ ತಂಡ ಏಕದಿನ ಪಂದ್ಯವನ್ನು ಆಡುತ್ತಿದೆ. ಮಹಿಳಾ ತಂಡ ಈ ಹಿಂದಿನ ಎರಡೂ ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿದೆ. ಪರ್ತ್‌ನ ಡಬ್ಲ್ಯುಎಸಿಎ ಮೈದಾನದಲ್ಲಿ ಟೀಮ್ ಇಂಡಿಯಾ ಚೇತೋಹಾರಿ ಪ್ರದರ್ಶನ ನೀಡಿದೆ. ಈ ವೇಳೆ ಟೀಮ್ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧನಾ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.
ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿತು. ಅನ್ನಾಬೆಲ್ ಸದರ್ಲ್ಯಾಂಡ್ 95 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 110 ರನ್ ಗಳಿಸಿ ತಂಡಕ್ಕೆ ನೆರವಾದರು. ಇವರ ಅಮೋಘ ಆಟದ ಪರಿಣಾಮ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 298 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅಮೊಘ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ.

ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ರಿಚಾ ಘೋಷ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಂತರ ಹರ್ಲೀನ್ ಡಿಯೋಲ್ ಸ್ಮೃತಿ ಮಂಧಾನಾ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ತಂಡದ ಮೊತ್ತ 134 ರನ್ ಆಗಿದ್ದಾಗ ಹರ್ಲೀನ್ (39 ರನ್) ಔಟ್ ಆದರು. ನಾಯಕ ಹರ್ಮನ್ ಪ್ರೀತ್ ಕೌರ್ ಬ್ಯಾಟ್ ಮೌನಕ್ಕೆ ಶರಣಾಗಿತ್ತು.

ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಸಹ ಸ್ಮೃತಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 109 ಎಸೆತಗಳಲ್ಲಿ 105 ರನ್ ಸಿಡಿಸಿದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 14 ಬೌಂಡರಿ, 1 ಸಿಕ್ಸರ್ ಸೇರಿವೆ. ಈ ಮೂಲಕ ಸ್ಮೃತಿ ಮಂಧನಾ ಆಸ್ಟ್ರೇಲಿಯಾ ವಿರುದ್ಧ ತಮ್ಮ ಎರಡನೇ ಶತಕ ಪೂರ್ಣಗೊಳಿಸಿದರು.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ 2 ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆ ಸ್ಮೃತಿ ಪಾಲಾಯಿತು. ಇದಕ್ಕೂ ಮೊದಲು ಭಾರತದ ಪರ ಯಾವೊಬ್ಬ ಬ್ಯಾಟರ್ ಸಹ ಈ ಸಾಧನೆ ಮಾಡಿರಲಿಲ್ಲ.
ಸ್ಮೃತಿ ಮಂಧನಾ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕ ಬಾರಿಸಿ ದಾಖಲೆಯನ್ನು ಬರೆದರು. ಈ ಮೂಲಕ ವಿಶ್ವ ಕ್ರಿಕಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.