ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ನೂತನವಾಗಿ ಬಿಡುಗಡೆ ಆದ ಮಹಿಳಾ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಇತ್ತೀಚಿಗೆ ನಡೆದ ಏಕದಿನ ಏಷ್ಯಾಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ಸ್ಮೃತಿ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದು, ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ಸ್ಥಿರತೆ ಕಾಪಾಡಿಕೊಂಡಿದ್ದಾರೆ.
ಭಾರತದ ಭರವಸೆಯ ಬ್ಯಾಟರ್ ಸ್ಮೃತಿ ಮಂಧಾನ ಅವರು ಐಸಿಸಿ ಶ್ರೇಯಾಂಕದಲ್ಲಿ ಒಂದು ಸ್ಥಾನ ಬಡ್ತಿ ಪಡೆದು, ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಇವರು ಒಟ್ಟು 738 ಅಂಕಗಳನ್ನು ಕಲೆ ಹಾಕಿದ್ದಾರೆ. ಈ ಮೊದಲು ಮೂರನೇ ಶ್ರೇಯಾಂಕದಲ್ಲಿ ಶ್ರೀಲಂಕಾದ ಸ್ಟಾರ್ ಆಟಗಾರ್ತಿ ಚಾಮರಿ ಅಟಪಟ್ಟು ಇದ್ದರು. ಆದರೆ ಅವರು ಈಗ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಚಾಮರಿ ಅಟಪಟ್ಟು ಆಡದ ಹಿನ್ನೆಲೆ ಕುಸಿತ ಅನುಭವಿಸಿದ್ದಾರೆ.

ನೂತನವಾಗಿ ಬಿಡುಗಡೆ ಆದ ಶ್ರೇಯಾಂಕ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಮೂರನೇ ಸ್ಥಾನ ಪಡೆದಿದ್ದು, ಏಕದಿನ ಮಾದರಿಯಲ್ಲಿ ಉತ್ತಮ ಶ್ರೇಯಾಂಕದ ಹೊಂದಿರುವ ಆಟಗಾರ್ತಿ ಆಗಿದ್ದಾರೆ. ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ 648 ಅಂಕಗಳನ್ನು ಕಲೆ ಹಾಕಿದ್ದು, 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಭರವಸೆಯ ಆಟಗಾರ್ತಿ ದೀಪ್ತಿ ಶರ್ಮಾ ಬ್ಯಾಟಿಂಗ್ ಶ್ರೇಯಾಂಕದಲ್ಲಿ 537 ಅಂಕಗಳೊಂದಿಗೆ 20ನೇ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಚಾಮರಿ ಅಟಪಟ್ಟು ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಉಳಿದಂತೆ ಶ್ರೀಲಂಕಾದ ನೀಲಾಕ್ಷಿಕಾ ಡಿ ಸಿಲ್ವಾ (32), ಹರ್ಷಿತಾ ಸಮರವಿಕ್ರಮ (44), ಕವಿಶಾ ದಿಲ್ಹಾರಿ (50), ತಮ್ಮ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದಾರೆ. ಇತ್ತೀಚಿಗೆ ನಡೆದಿದ್ದ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಮರವಿಕ್ರಮ ಅಬ್ಬರದ ಪ್ರದರ್ಶನ ನೀಡಿದ್ದರು.
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇವರು 783 ಅಂಕಗಳನ್ನು ಕಲೆ ಹಾಕಿದ್ದಾರೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಇದ್ದು, ಇವರು 756 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.

ಭಾರತದ ದೀಪ್ತಿ ಶರ್ಮಾ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಇವರು ಮಹಿಳಾ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಟಾಪ್ 20ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ದೀಪ್ತಿ 671 ಅಂಕಗಳೊಂದಿಗೆ ಸದ್ಯ ಐಸಿಸಿ ಬೌಲಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಸೋಫಿ ಎಕ್ಲೆಸ್ಟೋನ್ ಮೊದಲ ಸ್ಥಾನವನ್ನು ಪಡೆದರೆ, ಅದೆ ತಂಡದ ಕೇಟ್ ಕ್ರಾಸ್ ಎರಡನೇ ಸ್ಥಾನ ಹಾಗೂ ಆಸ್ಟ್ರೇಲಿಯಾದ ಮೇಗನ್ ಶುಟ್ ಮೂರನೇ ಸ್ಥಾನ ಪಡೆದಿದ್ದಾರೆ.