ಐಸಿಸಿ ತನ್ನ ವಾರ್ಷಿಕ ಪ್ರಶಸ್ತಿಯನ್ನು ಒಂದೊಂದಾಗಿ ಘೋಷಣೆ ಮಾಡುತ್ತಿದೆ. ಭಾರತದ ಯುವ ಬೌಲರ್ ಅರ್ಷದೀಪ್ ಸಿಂಗ್ ಮುಡಿಗೆ ಟಿ20 ಕ್ರಿಕೆಟಿಗ ಪ್ರಶಸ್ತಿ ಸಂದಿದೆ. ಸೋಮವಾರ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಐಸಿಸಿ ಘೋಷಣೆ ಮಾಡಿದೆ. ಈ ಪ್ರಶಸ್ತಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರಿಗೆ ಸಂದಿದೆ. ಸ್ಮೃತಿ ಅವರಿಗೆ ಐಸಿಸಿ ಏಕದಿನ ಪಂದ್ಯಗಳಲ್ಲಿ ನೀಡಿದ ಪ್ರದರ್ಶನಕ್ಕಾಗಿ ಪ್ರಶಸ್ತಿ ನೀಡಿದೆ. 2024ರಲ್ಲಿ ಸ್ಮೃತಿ ಮಂಧನಾ ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
ಸ್ಮೃತಿ ಮಂಧನಾ 2024ರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರು ಏಕದಿನ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳ ವಿರುದ್ಧ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3-0 ಸರಣಿ ಜಯ ಸಾಧಿಸಿದ್ದಾಗ ಸ್ಮೃತಿ ಎರಡು ಶತಕ ಬಾರಿಸಿ ಮಿಂಚಿದ್ದರು.

ಇನ್ನು ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಸಾಬೀತು ಪಡಿಸಿ, ಮೂರಂಕಿ ಮುಟ್ಟಿದರು. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಮೃತಿ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದರು. ಕಳೆದ ವರ್ಷ ಸ್ಮೃತಿ ಮಂಧನಾ 13 ಏಕದಿನ ಪಂದ್ಯದಲ್ಲಿ 747 ರನ್ ಸಿಡಿಸಿದ್ದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿತ್ತು. ಮಂಧನಾ ಕಳೆದ ವರ್ಷ 57.86 ರ ಸರಾಸರಿ ಮತ್ತು 95.15 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದರು.
ಸ್ಮೃತಿ ಈ ವರ್ಷದ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರ, ನಂತರದ ಸ್ಥಾನದಲ್ಲಿ ಲಾರಾ ವೋಲ್ವಾರ್ಡ್ (697), ಟ್ಯಾಮಿ ಬ್ಯೂಮಾಂಟ್ (554) ಮತ್ತು ಹೇಲಿ ಮ್ಯಾಥ್ಯೂಸ್ (469) ನಂತರದ ಸ್ಥಾನದಲ್ಲಿದ್ದಾರೆ.

ಸ್ಮೃತಿ ಅವರು ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಇವರು ಆಡಿದ 24 ಪಂದ್ಯಗಳಲ್ಲಿ 1358 ರನ್ ಬಾರಿಸಿ ಭರವಸೆ ಮೀಡಿಸಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ನಾಲ್ಕಂಕಿ ರನ್ ಕಲೆ ಹಾಕಿದ ವಿಶ್ವ ಐದು ಬ್ಯಾಟರ್‌ಗಳಲ್ಲಿ ಇವರಿಗೂ ಸ್ಥಾನ. ಸ್ಮೃತಿ ಅವರ ಈ ವರ್ಷ ತುಂಬ ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯಬಹುದಾದ ಇನಿಂಗ್ಸ್ ಎಂದರೆ, ಪರ್ತ್‌ನಲ್ಲಿ ಆಡಿದ ಆಟ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಶತಕ ಬಾರಿಸಿದ್ದ ಸ್ಮೃತಿ ಮಿಂಚಿದ್ದರು.
ಸ್ಮೃತಿ ಮಂಧನಾ ಭಾರತದ ಪರ 97 ಏಕದಿನ ಪಂದ್ಯಗಳನ್ನು ಆಡಿದ್ದು, 46.25ರ ಸರಾಸರಿಯಲ್ಲಿ 4209 ರನ್ ಸಿಡಿಸಿದ್ದಾರೆ. ಈ ವೇಳೆ 10 ಶತಕ ಹಾಗೂ 30 ಅರ್ಧಶತಕಗಳು ಸೇರಿವೆ.