ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ ಟಿ20 ಪಂದ್ಯವನ್ನು ಆಡುತ್ತಿದೆ. ಈ ವೇಳೆ ಮೊದಲ ಟಿ20 ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಸ್ಮೃತಿ ಮಂಧನಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದಾರೆ. ಇವರು ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ಇವರ ಈ ಅಮೋಘ ಇನಿಂಗ್ಸ್ ಮಂಧನಾ ಐಸಿಸಿ ಶ್ರೇಯಾಂಕದಲ್ಲಿ ಬಡ್ತಿ ಪಡೆಯಲು ಕಾರಣವಾಗಿದೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಎರಡನೇ ವಿಶ್ವದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸ್ಮೃತಿ ಪಾತ್ರರಾಗಿದ್ದಾರೆ. ಅಲ್ಲದೆ ಭಾರತದ ಪರ ಮೂರು ಫಾರ್ಮೆಟ್‌ಗಳಲ್ಲಿ ಶತಕದ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಶ್ರೇಯ ಸಹ ಸ್ಮೃತಿ ಅವರದ್ದಾಗಿದೆ. ಇಂಗ್ಲೆಂಡ್‌ನಲ್ಲಿ ನೀಡಿದ ಪ್ರದರ್ಶನ ಇವರ ಐಸಿಸಿ ರ್ಯಾಂಕಿಂಗ್ ಉತ್ತಮವಾಗಲು ಸಹಾಯ ಮಾಡಿದೆ.

ಸ್ಮೃತಿ ಮಂಧನಾ ಟಿ20 ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಸದ್ಯ ಇವರ ಬುಟ್ಟಿಯಲ್ಲಿ 771 ರೇಟಿಂಗ್ ಪಾಯಿಂಟ್‌ಗಳಿದ್ದು, ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಇನ್ನು ನಾಲ್ಕು ಪಂದ್ಯಗಳನ್ನು ಆಡಲಿದ್ದು, ಈ ವೇಳೆ ಇದೇ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಂಡರೆ ಸ್ಮೃತಿ ನಂಬರ್ 1 ಸ್ಥಾನಕ್ಕೂ ಏರಬಹುದು.
ಐಸಿಸಿ ರ‍್ಯಾಂಂಕಿಂಗ್‌ನಲ್ಲಿ ಹರ್ಮನ್ ಪ್ರೀತ್ ಕೌರ್ 622 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಶೆಫಾಲಿ ವರ್ಮಾ ಶ್ರೇಯಾಂಕದಲ್ಲಿ ಬಡ್ತಿ ಆಗಿದೆ. ಸದ್ಯ ಇವರು ಒಂದು ಸ್ಥಾನ ಏರಿಕೆ ಕಂಡಿದ್ದು 13ನೇ ಸ್ಥಾನದಲ್ಲಿದ್ದಾರೆ. ಭಾರತದ ಭರವಸೆಯ ಬ್ಯಾಟರ್ ಜೇಮಿಮಾ ರೋಡ್ರಿಗಸ್ ಒಂದು ಸ್ಥಾನ ಕುಸಿತ ಕಂಡಿದ್ದು 15ನೇ ಸ್ಥಾನದಲ್ಲಿದ್ದಾರೆ.
ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಬೆತ್ ಮೂನಿ 794 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಹ್ಯಾಲಿ ಮ್ಯಾಥ್ಯೂಸ್ ಇದ್ದು ಇವರು 774 ಅಂಕ ಕಲೆ ಹಾಕಿದ್ದಾರೆ. ಹ್ಯಾಲಿ ಮ್ಯಥ್ಯೂಸ್ ಹಾಗೂ ಸ್ಮೃತಿಗೆ ಕೇವಲ ಮೂರು ಅಂಕಗಳ ವ್ಯತ್ಯಾಸ ಇದೆ.

ಭಾರತದ ಸ್ಟಾರ್ ಬೌಲರ್ ದೀಪ್ತಿ ಶರ್ಮಾ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಇವರು 735 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ರಿಂಕು ಸಿಂಗ್ ಸಹ ಒಂದು ಸ್ಥಾನ ಇಳಿಕೆ ಕಂಡಿದ್ದು, ಆರನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಪಾಕ್‌ನ ಸಾದಿಯಾ ಇಕ್ಬಾಲ್ ಅಗ್ರ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಎರಡನೇ ಸ್ಥಾನದಲ್ಲಿದ್ದಾರೆ.
ಟಿ20 ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಭಾರತದ ದೀಪ್ತಿ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಒಟ್ಟು 393 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.