ಕೋಲ್ಕತ್ತಾದಲ್ಲಿರುವ ಸೌರವ್ ಗಂಗೂಲಿ ಅವರ ಭವ್ಯ ಮಹಲಿನಲ್ಲಿದೆ 48 ಕೋಣೆ; ಬಂಗಲೇಯ ಬಗ್ಗೆ ಇಲ್ಲಿದೆ ಮಾಹಿತಿ
ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸೌರವ್ ಗಂಗೂಲಿ ಅವರು ಜುಲೈ 8 ರಂದು ತಮ್ಮ 54ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ದಾದಾ ಎಂದೇ ಕರೆಯುತ್ತಾರೆ. ಇವರು ತಮ್ಮ ಆಕ್ರಮಣಕಾರಿ ಆಟ, ನಾಯಕತ್ವದ ಗುಣಗಳಿಂದಲೇ ಹೆಸರುವಾಸಿ. ಇವರನ್ನು ಅಭಿಮಾನಿಗಳು ಪ್ರಿನ್ಸ್ ಆಫ್ ಕೋಲ್ಕತ್ತಾ ಎಂದೇ ಕರೆಯುತ್ತಾರೆ.
ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಹೊಸ ಹೊಸ ಆಟಗಾರರು ತಂಡವನ್ನು ಸೇರಿದರು. ಹೀಗಾಗಿ ಇವರ ನಾಯಕತ್ವದ ಯುಗವನ್ನು ಹೆಚ್ಚು ನೆನಪಿನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಇವರು ಮೈದಾನದಲ್ಲಿ ತಮ್ಮ ಆಟದಷ್ಟೇ ಜೀವನ ಶೈಲಿಯಿಂದಲೂ ಹೆಸರುವಾಸಿ. ಕೋಲ್ಕತ್ತಾದ ಬೆಹಾಲಾ ನೆರೆಹೊರೆಯಲ್ಲಿರುವ ಅವರ ಸಾಂಪ್ರದಾಯಿಕ ಪೂರ್ವಜರ ಮನೆ ನೋಡಲು ಎರಡು ಕಣ್ಣು ಸಾಲದು. ಈ ಮನೆಯಲ್ಲಿ ಗಂಗೂಲಿ ಕೂಡು ಕುಟುಂಬ ವಾಸವಿದೆ.

60 ವರ್ಷಗಳಿಗೂ ಹೆಚ್ಚು ಕಾಲ ಗಂಗೂಲಿ ಕುಟುಂಬಕ್ಕೆ ನೆರಳಾಗಿರುವ ಈ ನಿವಾಸ ನಗರದ ಪ್ರಸಿದ್ಧ ಪಾರಂಪರಿಕ ಮನೆಗಳಲ್ಲಿ ಒಂದು. ದಾದಾ ತಮ್ಮ ಆಟದಿಂದ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದರೂ ಸಹ ತಮ್ಮ ಕುಟುಂಬದೊಂದಿಗೆ ಈ ಮನೆಯಲ್ಲಿ ಸುಂದರ ಬದುಕು ನಡೆಸುತ್ತಿದ್ದಾರೆ. ಈ ಮಹಲು ಸಾಂಪ್ರದಾಯಿಕ ವಾಸ್ತುಶಿಲ್ಪ, ವಿಶಾಲವಾದ ಒಳಾಂಗಣ ಒಳಗೊಂಡಿದೆ. ಹಳೆಯ ಮನೆಗೆ ಆಧುನಿಕ ಟಚ್ ನೀಡಲಾಗಿದ್ದು, ಈ ಮನೆ ಕೋಲ್ಕತ್ತಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
48 ಕೋಣೆಗಳ ದೊಡ್ಡ ಬಂಗಲೆ
ರಿಯಲ್ ಎಸ್ಟೇಟ್ ಕಂಪನಿ ನೋಬ್ರೋಕರ್ ಪ್ರಕಾರ, ಗಂಗೂಲಿಯವರ ನಿವಾಸವು ಸುಮಾರು 40 ಕೋಟಿ ರೂ.ಗಳಷ್ಟು ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಈ ಮನೆಯಲ್ಲಿ 48 ಕೋಣೆಗಳಿದ್ದು, ನಗರದ ಅತಿ ದೊಡ್ಡ ಖಾಸಗಿ ನಿವಾಸಗಳಲ್ಲಿ ಇದು ಒಂದಾಗಿದೆ.

ಮನೆಯ ಸೌಂದರ್ಯಕ್ಕೆ ವಾಲ್ ಅಫ್ ಫೇಮ್ ದೊಡ್ಡ ಮೆರಗನ್ನು ನೀಡಿದೆ. ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ಬದುಕಿನ ಉದ್ದಕ್ಕೂ ಸಾಗಿ ಬಂದ ಹೆಮ್ಮೆಯ ಕ್ಷಣಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಕೋಣೆಯ ಒಂದು ಕಡೆಯಲ್ಲಿ ಕಂದು ಬಣ್ಣದ ಸೋಫಾಗಳು ಸಂದರ್ಶಕರನ್ನು ಕೈ ಬೀಸಿ ಕರೆಯುತ್ತವೆ. ಇನ್ನು ಅಚ್ಚು ಕಟ್ಟಾಗಿ ಹೊಂದಿಸಿಟ್ಟಿರುವ ಟ್ರೋಫಿಗಳು ಕೋಣೆಯ ಅಂದವನ್ನು ಹೆಚ್ಚಿಸಿವೆ. ಧರಿಸಿದ್ದ ಜರ್ಸಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಗ್ಲಾಸ್ ಕ್ಯಾಬಿನೆಟ್‌ಗಳಲ್ಲಿ ಪ್ರದರ್ಶಿಸಲಾಗಿದೆ.
ಸುಂದರ ಡೈನಿಂಗ್ ಹಾಲ್
ಗಂಗೂಲಿ ಅವರ ಮನೆಯ ಊಟದ ಕೋಣೆಯನ್ನು ನೋಡಿದರೆ, ನೋಡುತ್ತಲೇ ಇರಬೇಕು ಎಂದು ಎನಿಸುತ್ತದೆ. ವಿಶಾಲವಾದ ಡೈನಿಂಗ್ ಹಾಲ್‌ನ ಊಟದ ಮೇಜಿನ ಸುತ್ತಲೂ ಬಹು ವಿಂಟೇಜ್ ಶೈಲಿಯ ಕುರ್ಚಿಗಳನ್ನು ನೋಡಬಹುದು. ಈ ಕೋಣೆ ಗಂಗೂಲಿ ಅವರ ಐಷಾರಾಮಿ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮನೆಯ ಸುತ್ತಲೂ ಸುಂದರವಾದ ಲಾನ್ ಇದ್ದು, ಮಾವು, ಹಲಸು ಸೇರಿದಂತೆ ವಿವಿಧ ಬಗೆಯ ಮರಗಳಿವೆ. ಅಲ್ಲದೆ ದಾದಾ ಬಾಲ್ಯದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಸಣ್ಣ ಕ್ರಿಕೆಟ್ ಪಿಚ್ ಕೂಡ ಈ ಬಂಗಲೆಯ ಆವರಣದಲ್ಲಿದೆ. ಕೋಲ್ಕತ್ತಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಟ್ಟಿರುವ ದಾದಾ ಅವರ ಈ ಭವ್ಯ ಮಹಲು, ಅವರ ಕ್ರಿಕೆಟ್ ಸಾಧನೆ ಮತ್ತು ರಾಜ ಗಾಂಭೀರ್ಯದ ಜೀವನಶೈಲಿಗೆ ಕನ್ನಡಿ ಹಿಡಿದಂತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications