ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕಾರು ಅಪಘಾತಕ್ಕೀಡಾಗಿದೆ. ಗುರುವಾರ ರಾತ್ರಿ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ಬುರ್ದ್ವಾನ್‌ಗೆ ಸಮಾರಂಭವೊಂದರಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯ ದಂತನ್‌ಪುರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಸೌರವ್ ಗಂಗೂಲಿ ಪ್ರಯಾಣಿಸುತ್ತಿದ್ದ ಕಾರಿನ ಮುಂದೆ ಚಲಿಸುತ್ತಿದ್ದ ಲಾರಿಯೊಂದು ಹಠಾತ್ತನೆ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬಂದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ.
ಲಾರಿ ಡಿಕ್ಕಿಯಾದಾಗ ಸೌರವ್ ಗಂಗೂಲಿ ಕಾರಿನ ಚಾಲಕ ಅಪಘಾತವನ್ನು ತಪ್ಪಿಸಲು ತಕ್ಷಣ ಬ್ರೇಕ್ ಹಾಕಿದ್ದಾರೆ. ಪರಿಣಾಮವಾಗಿ ಹಿಂದಿನಿಂದ ಬರುತ್ತಿದ್ದ ಬೆಂಗಾವಲು ಪಡೆಯ ಎಲ್ಲಾ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆಯಾಗಿವೆ. ಆದರೆ, ಈ ಭೀಕರ ಅಪಘಾತದಲ್ಲಿ ಸೌರವ್ ಗಂಗೂಲಿ ಅದೃಷ್ಟವಶಾತ್ ಪಾರಾಗಿದ್ದಾರೆ. ಗಂಗೂಲಿ ಅವರ ಬೆಂಗಾವಲು ಪಡೆಯಲ್ಲಿದ್ದ ಎರಡು ವಾಹನಗಳಿಗೆ ಹಾನಿಯಾಗಿದೆ.

ಅಪಘಾತದಿಂದಾಗಿ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಗಂಗೂಲಿ ಸುಮಾರು 10 ನಿಮಿಷಗಳ ಕಾಲ ರಸ್ತೆಯಲ್ಲಿ ಕಾಯಬೇಕಾಯಿತು. ಅಲ್ಲಿಂದ ಸ್ವಲ್ಪ ಸಮಯದ ಬಳಿಕ ಗಂಗೂಲಿ ಬೇರೆ ವಾಹನದಲ್ಲಿ ಸಮಾರಂಭಕ್ಕೆ ತೆರಳಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೌರವ್ ಗಂಗೂಲಿ ಭಾರತ ತಂಡ ಕಂಡ ದಿಗ್ಗಜ ನಾಯಕರಲ್ಲಿ ಒಬ್ಬರು. ಗಂಗೂಲಿ ನಾಯಕರಾಗಿ ಭಾರತ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಅವರು ಟೀಮ್ ಇಂಡಿಯಾ ಪರ 311 ಏಕದಿನ ಪಂದ್ಯಗಳಲ್ಲಿ 40.73 ಸರಾಸರಿಯಲ್ಲಿ 11363 ರನ್ ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 22 ಶತಕ ಮತ್ತು 72 ಅರ್ಧಶತಕಗಳನ್ನು ಹೊಂದಿದ್ದಾರೆ. ಅತ್ಯುತ್ತಮ ಸ್ಕೋರ್ 183 ರನ್‌ಗಳು. ಅವರು ಟೆಸ್ಟ್ ಪಂದ್ಯಗಳಲ್ಲಿ 42.18 ಸರಾಸರಿಯಲ್ಲಿ 7212 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗಂಗೂಲಿ ಅವರ ಅತ್ಯುತ್ತಮ ಸ್ಕೋರ್ 239 ರನ್‌ಗಳು.