ಶ್ರೀಲಂಕಾ ವಿರುದ್ಧ ಟೆಸ್ಟ್: ಕೊಹ್ಲಿ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಕೊಟ್ಟ ಗಂಗೂಲಿ!

ಈ ವರ್ಷದ ಆರಂಭದಲ್ಲಿಯೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳನ್ನು ಸೋಲುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿರುವ ಟೀಮ್ ಇಂಡಿಯಾ ಇದೀಗ ತವರು ನೆಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸಲು ಸಜ್ಜಾಗಿದೆ. ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಲು ಕೆರಿಬಿಯನ್ನರು ಈಗಾಗಲೇ ಭಾರತವನ್ನು ತಲುಪಿದ್ದು ಇತ್ತಂಡಗಳ ನಡುವಿನ ಏಕದಿನ ಸರಣಿ ಫೆಬ್ರವರಿ 6ರಿಂದ ಆರಂಭವಾದರೆ, ಟಿ ಟ್ವೆಂಟಿ ಸರಣಿ ಫೆಬ್ರವರಿ 16ರಿಂದ ಶುರುವಾಗಲಿದೆ.
ಹೀಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳ ಆತಿಥ್ಯ ವಹಿಸಿದ ನಂತರ ಬಿಸಿಸಿಐ ಶ್ರೀಲಂಕಾ ವಿರುದ್ಧದ ಪಂದ್ಯಗಳ ಆತಿಥ್ಯವನ್ನು ವಹಿಸಲಿದೆ. ಹೌದು, ಸದ್ಯ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಳು ಮುಕ್ತಾಯಗೊಂಡ ನಂತರ ಫೆಬ್ರವರಿ ಕೊನೆಯಲ್ಲಿ ಹಾಗೂ ಮಾರ್ಚ್ ತಿಂಗಳಿನ ಆರಂಭದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಗಳು ಭಾರತದಲ್ಲಿಯೇ ನಡೆಯಲಿವೆ.
ಇನ್ನು ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ವಿರಾಟ್ ಕೊಹ್ಲಿ ತನ್ನ ನೂರನೇ ಟೆಸ್ಟ್ ಪಂದ್ಯದಲ್ಲಿ ತಾನೇ ನಾಯಕನಾಗಿ ಕಣಕ್ಕಿಳಿಯಬೇಕಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದು, ಬಿಸಿಸಿಐ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬುದನ್ನು ಘೋಷಿಸಬೇಕಿದೆ. ಸದ್ಯ ಭಾರತ ಪ್ರವಾಸವನ್ನು ಕೈಗೊಳ್ಳುತ್ತಿರುವ ವೆಸ್ಟ್ ಇಂಡೀಸ್ ಹಾಗೂ ಟೀಮ್ ಇಂಡಿಯಾ ನಡುವೆ ಟೆಸ್ಟ್ ಸರಣಿ ಇಲ್ಲದ ಕಾರಣ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಬಿಟ್ಟುಕೊಡದ ಬಿಸಿಸಿಐ ಈ ವೆಸ್ಟ್ ಇಂಡೀಸ್ ಸರಣಿ ಮುಗಿದ ಬಳಿಕ ಭಾರತ ಟೆಸ್ಟ್ ತಂಡದ ನೂತನ ನಾಯಕ ಯಾರು ಎಂಬುದನ್ನು ಘೋಷಿಸಲಿದೆ. ಹೀಗಿರುವಾಗಲೇ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಪಾಲಿನ ನೂರನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ್ದು, ಈ ಕೆಳಕಂಡ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಕುರಿತು ಮಾಹಿತಿ ಹಂಚಿಕೊಂಡ ಗಂಗೂಲಿ
ಸದ್ಯ ವಿರಾಟ್ ಕೊಹ್ಲಿ 99 ಟೆಸ್ಟ್ ಪಂದ್ಯಗಳನ್ನಾಡಿದ್ದು ತನ್ನ ನೂರನೇ ಟೆಸ್ಟ್ ಪಂದ್ಯವನ್ನಾಡಬೇಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳು ಮುಗಿದ ನಂತರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯವು ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯವಾಗಿದ್ದು, ಈ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಗಂಗೂಲಿ ಮಾಹಿತಿಯನ್ನು ನೀಡಿದ್ದಾರೆ. ಬೆಂಗಳೂರಿನ ಜೊತೆ ನಂಟನ್ನು ಹೊಂದಿರುವ ವಿರಾಟ್ ಕೊಹ್ಲಿ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲಿದ್ದಾರೆ ಎಂದು ಈ ಹಿಂದಿನಿಂದಲೂ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕೊಹ್ಲಿ ನೂರನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಆಯೋಜನೆ ಆಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈ ಎಲ್ಲಾ ವದಂತಿಗಳನ್ನು ಬದಿಗೆ ಸರಿಸಿರುವ ಗಂಗೂಲಿ ಶ್ರೀಲಂಕಾ ವಿರುದ್ಧದ ಆ ಪಂದ್ಯ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ನಡೆಯಲಿರುವ ಮೂರನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯವಿದು
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ ಎಂದು ಸೌರವ್ ಗಂಗೂಲಿ ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಬಿಸಿಸಿಐ ಭಾರತದಲ್ಲಿ ಆಯೋಜಿಸಲಿರುವ ಮೂರನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇದಾಗಲಿದೆ. ಈ ಹಿಂದೆ 2019ರ ನವೆಂಬರ್ ತಿಂಗಳಿನಲ್ಲಿ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ಬಿಸಿಸಿಐ ಆಯೋಜಿಸಿತ್ತು, ನಂತರ 2021ರ ಫೆಬ್ರವರಿ ತಿಂಗಳಿನಲ್ಲಿ ಅಹಮದಾಬಾದ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಬಿಸಿಸಿಐ ಆಯೋಜಿಸಿತ್ತು.

ಉಳಿದ ಪಂದ್ಯಗಳು ನಡೆಯುವ ಸ್ಥಳ ಇನ್ನೂ ತೀರ್ಮಾನವಾಗಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಸೌರವ್ ಗಂಗೂಲಿ ಶ್ರೀಲಂಕಾ ವಿರುದ್ಧದ ಉಳಿದ ಪಂದ್ಯಗಳು ನಡೆಯುವ ಕ್ರೀಡಾಂಗಣಗಳನ್ನು ಇನ್ನೂ ನಿಗದಿಪಡಿಸಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ ನಗರಗಳಲ್ಲಿ ಉಳಿದ ಪಂದ್ಯಗಳನ್ನು ಏರ್ಪಡಿಸುವ ಚಿಂತನೆ ನಡೆಸುತ್ತಿದ್ದು ಕೊರೋನಾವೈರಸ್ ಬಗ್ಗೆ ಕೂಡ ಚಿಂತಿಸಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications