ರೋಹಿತ್ ತಂಡದಿಂದ ಹೊರಗುಳಿದು ಬೇರೆಯವರು ನಾಯಕರಾದರೆ ಅನುಕೂಲವಿದೆ ಎಂದ ಗಂಗೂಲಿ!

ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವದಿಂದ ಕೆಳಗಿಳಿದು ರೋಹಿತ್ ಶರ್ಮಾ ಟೀಂ ಇಂಡಿಯಾದ ಪೂರ್ಣಾವಧಿ ನಾಯಕನಾಗಿ ಆಯ್ಕೆಗೊಂಡರು. ಆದರೆ, ರೋಹಿತ್ ಶರ್ಮಾ ಆರಂಭದ ಕೆಲ ಸರಣಿಗಳಿಗೆ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಏಕದಿನ ಸರಣಿ ಹಾಗೂ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.
ಇನ್ನು ನಂತರ ಜೂನ್ ತಿಂಗಳಿನಲ್ಲಿ ತವರಿನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ಸಹ ರೋಹಿತ್ ಅಲಭ್ಯತೆಯಡಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ನಾಯಕನಾಗಿ ಮುನ್ನಡೆಸಬೇಕಿತ್ತು. ಆದರೆ, ಪ್ರಥಮ ಪಂದ್ಯದ ಹಿಂದಿನ ದಿನ ಕೆಎಲ್ ರಾಹುಲ್ ಗಾಯಕ್ಕೆ ಒಳಗಾದ ಕಾರಣ ರಿಷಭ್ ಪಂತ್ ನಾಯಕತ್ವವನ್ನು ವಹಿಸಿಕೊಂಡರು ಹಾಗೂ ಇತ್ತೀಚೆಗಷ್ಟೇ ನಡೆದ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಇನ್ನು ಶ್ರೀಲಂಕಾ ಪ್ರವಾಸದಲ್ಲಿ ಹಾಗೂ ಇತ್ತೀಚಿಗಷ್ಟೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್ ಭಾರತ ತಂಡದ ನಾಯಕನಾಗಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಹೀಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪೂರ್ಣಾವಧಿ ನಾಯಕನಾದ ನಂತರ ವಿವಿಧ ಸರಣಿಗಳಲ್ಲಿ ವಿವಿಧ ನಾಯಕರು ಪ್ರತಿನಿಧಿಸಿದ್ದು, ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಸುಮಾರು ಎಂಟು ನಾಯಕರು ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಪಡುವುದು ಮಾತ್ರವಲ್ಲದೇ ದೊಡ್ಡ ಮಟ್ಟದಲ್ಲಿ ಟ್ರೋಲ್ ಕೂಡ ಆಗಿತ್ತು. ಇನ್ನು ಈ ವಿಷಯದ ಕುರಿತಾಗಿ ಬಿಸಿಸಿಐ ಈ ಇಲ್ಲಿಯವರೆಗೂ ಒಮ್ಮೆಯೂ ಸಹ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಇದೀಗ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದು, ಪದೇ ಪದೇ ನಾಯಕರ ಬದಲಾವಣೆ ಮಾಡುವುದರಿಂದ ಅನುಕೂಲವಿದೆ ಎಂದಿದ್ದಾರೆ.

ನಾಯಕರ ಬದಲಾವಣೆ ಬಗ್ಗೆ ಮನಬಿಚ್ಚಿ ಮಾತನಾಡಿದ ಗಂಗೂಲಿ
ರೋಹಿತ್ ಶರ್ಮಾ ಭಾರತ ತಂಡದ ಪೂರ್ಣಾವಧಿ ನಾಯಕನಾಗಿದ್ದು, ಸಾಲು ಸಾಲು ಪಂದ್ಯಗಳಲ್ಲಿ ಆಡುವುದರಿಂದ ಗಾಯದ ಸಮಸ್ಯೆಗೊಳಗಾಗುವುದು ಸಹಜ ಹಾಗೂ ಇದರಿಂದ ಕಡ್ಡಾಯವಾಗಿ ವಿಶ್ರಾಂತಿಯ ವಿರಾಮವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಹಾಗೂ ಇದು ಹೊಸ ಆಟಗಾರರಿಗೆ ತಂಡ ಸೇರಲು ಹಾಗೂ ಹೊಸ ನಾಯಕರು ತಂಡವನ್ನು ಮುನ್ನಡೆಸಲು ಅನುಕೂಲ ನೀಡಲಿದ್ದು, ಭಾರತ ಈ ನೂತನ ನಾಯಕರು ಮತ್ತು ಯುವ ಆಟಗಾರರ ಅಡಿಯಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆದ್ದಿದೆ, ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ 30 ಆಟಗಾರರಿದ್ದು, ಯಾವುದೇ ತಂಡದ ವಿರುದ್ಧ ಯಾವುದೇ ಸಮಯದಲ್ಲಿ ಬೇಕಾದರೂ ಸೆಣಸಾಡಬಹುದು ಎಂದು ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಗಾಯದ ಸಮಸ್ಯೆಯಿಂದ ಹೊರ ಉಳಿದಾಗಲೆಲ್ಲಾ ನೂತನ ನಾಯಕನ ಉಗಮವಾಗಿದೆ ಹಾಗೂ ಇದರಿಂದ ತಂಡಕ್ಕೆ ಅನುಕೂಲವಾಗಿದೆ ಎಂಬರ್ಥದಲ್ಲಿ ಗಂಗೂಲಿ ಹೇಳಿಕೆ ನೀಡಿದ್ದಾರೆ.

ಕಳೆದ ಜುಲೈನಿಂದ ಈ ಜುಲೈವರೆಗೆ ಒಟ್ಟು ಎಂಟು ನಾಯಕರು
ಕಳೆದ ವರ್ಷದ ಜುಲೈ ತಿಂಗಳಿನಿಂದ ಈ ವರ್ಷದ ಜುಲೈ ತಿಂಗಳಿನವರೆಗೆ ಟೀಮ್ ಇಂಡಿಯಾದ ನಾಯಕನಾಗಿ ತಂಡವನ್ನು ಪ್ರತಿನಿಧಿಸಿರುವ ಆಟಗಾರರ ಪಟ್ಟಿ ಕೆಳಕಂಡಂತಿದೆ.
1. ಜುಲೈ 2021, ಭಾರತ vs ಶ್ರೀಲಂಕಾ ಸರಣಿ - ಶಿಖರ್ ಧವನ್
2. ಆಗಸ್ಟ್ 2021, ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ - ವಿರಾಟ್ ಕೊಹ್ಲಿ
3. ನವೆಂಬರ್ 2021, ಭಾರತ vs ನ್ಯೂಜಿಲೆಂಡ್ ಸೀಮಿತ ಓವರ್ ಸರಣಿ - ರೋಹಿತ್ ಶರ್ಮಾ
4. ನವೆಂಬರ್ 2021, ಭಾರತ vs ನ್ಯೂಜಿಲೆಂಡ್ ಟೆಸ್ಟ್ - ಅಜಿಂಕ್ಯಾ ರಹಾನೆ
5. ಜನವರಿ 2022, ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿ - ಕೆಎಲ್ ರಾಹುಲ್
6. ಜೂನ್ 2022, ಭಾರತ vs ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಸರಣಿ - ರಿಷಭ್ ಪಂತ್
7. ಜೂನ್ 2022, ಭಾರತ vs ಐರ್ಲೆಂಡ್ ಟಿ ಟ್ವೆಂಟಿ ಸರಣಿ - ಹಾರ್ದಿಕ್ ಪಾಂಡ್ಯ
8. ಜುಲೈ 2022, ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ - ಜಸ್ಪ್ರಿತ್ ಬುಮ್ರಾ

ರೋಹಿತ್ ಶರ್ಮಾ ನಾಯನಾಗಿ ಮುನ್ನಡೆಸಿದ ಸರಣಿಗಳಲ್ಲೆಲ್ಲಾ ಗೆಲುವು
ಇನ್ನು ರೋಹಿತ್ ಶರ್ಮಾ ಪೂರ್ಣಾವಧಿ ನಾಯಕನಾಗಿ ನೇಮಕವಾದ ನಂತರ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಎಲ್ಲಾ ಸರಣಿಗಳಲ್ಲಿಯೂ ತಂಡ ಗೆದ್ದು ಬೀಗಿದೆ. ಈ ಮೂಲಕ ರೋಹಿತ್ ಶರ್ಮಾ ಸದ್ಯ ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications